ನವದೆಹಲಿ, ಮೇ 27 (DaijiworldNews/HR): ಕೆಲವು ದಶಕಗಳ ಹಿಂದೆ ರಸ್ತೆಗಳ ರಾಜನೆಂದು ಹೆಸರುವಾಸಿಯಾಗಿದ್ದ, ದೇಶದ ಕಾರು ಮಾರು ಕಟ್ಟೆಯನ್ನು ಆಳಿದ್ದ ಅಂಬಾಸಡರ್ ಕಾರು ಮತ್ತೆ ಹೊಸ ಅವತಾರದೊಂದಿಗೆ ಪ್ರತ್ಯಕ್ಷವಾಗಲಿದ್ದಾನೆ ಎಂದು ತಿಳಿದು ಬಂದಿದೆ.
ಹಿಂಡ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್ಎಂಎಫ್ಸಿಐ) ಮತ್ತು ಫ್ರೆಂಚ್ ಕಾರು ಕಂಪೆನಿ ಪಝೋಟ್ 'ಆಯಂಬಿ'ಯ ಹೊಸ ನೂತನ ವಿನ್ಯಾಸ ಮತ್ತು ಎಂಜಿನ್ಗಾಗಿ ಸಹಯೋಗ ಸ್ಥಾಪಿಸಿಕೊಂಡಿದ್ದು, ಅಂಬಾಸಿಡರ್ ಕಾರು ಅನ್ನು ಹೊಸ ಅವತಾರದಲ್ಲಿ ಅನಾವರಣಗೊಳಿಸಲಿವೆ.
ಇನ್ನು ಸಿಕೆ ಬಿರ್ಲಾ ಸಮೂಹದ ಅಂಗಸಂಸ್ಥೆಯಾದ ಹಿಂದುಸ್ತಾನ್ ಮೋಟಾರ್ಸ್ ನ ಚೆನ್ನೈ ಘಟಕದಲ್ಲಿ ಹೊಸ ಮಾದರಿಯ ನಿರ್ಮಾಣ ಕಾರ್ಯ ನಡೆಯಲಿದ್ದು, ಈ ಘಟಕವು ಈ ಹಿಂದೆ ಮಿಟ್ಸುಬಿಶಿ ಕಾರುಗಳನ್ನು ತಯಾರಿಸಿತ್ತು.
ದೇಶದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿ ಹಿಂದುಸ್ತಾನ್ ಮೋಟಾರ್ಸ್ 2014ರಲ್ಲಿ ಅಂಬಾಸಿಡರ್ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದು, ಭಾರೀ ಪ್ರಮಾಣದ ಸಾಲ ಹಾಗೂ ಬೇಡಿಕೆಯ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಂಡಿತ್ತು.
ಇನ್ನು ತಂತ್ರಜ್ಞಾನ ಹಾಗೂ ಆರಾಮದಾಯಕತೆಯಲ್ಲಿ ಬೇರೆ ಕಾರುಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದಿದ್ದಾಗ ಅಂಬಾಸಿಡರ್ ಇತಿಹಾಸದ ಪುಟ ಸೇರಿದ್ದು, 2017ರಲ್ಲಿ ಈ ಕಂಪನಿಯ ಮಾಲೀಕ ಸಿಕೆ ಬಿರ್ಲಾ ಗ್ರೂಪ್, ಈ ಕಾರಿನ ಬ್ರ್ಯಾಂಡ್ ಅನ್ನು ಫ್ರಾನ್ಸ್ನ ಕಂಪನಿಗೆ 80 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು.
ಇದೀಗ ಕಾರಿನ ನೂತನ ಎಂಜಿನ್ನ ಮೆಕ್ಯಾನಿಕಲ್ ವಿನ್ಯಾಸದ ಕೆಲಸವು ನಿರ್ಣಾಯಕ ಹಂತಕ್ಕೆ ಬಂದಿದ್ದು, ಹೊಸ ಅವತಾರದೊಂದಿಗೆ ಇನ್ನೆರಡು ವರ್ಷ ಗಳಲ್ಲೇ ಆಯಂಬಿ ರಸ್ತೆಗಿಳಿಯಲಿದೆ.