ಬೆಂಗಳೂರು, ಮೇ 27 (DaijiworldNews/DB): ಹೆರೋಹಳ್ಳಿ ವಾರ್ಡ್ನ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು (46) ಆತ್ಮಹತ್ಯೆ ಸಂಬಂಧ ತನಿಖೆ ಮುಂದುವರಿಸಿರುವ ಪೊಲೀಸರಿಗೆ, ಅವರು ನೇಣು ಹಾಕಿಕೊಳ್ಳಲು ಬಳಸಿದ್ದರೆನ್ನಲಾದ ಶಾಲು ಅರ್ಧ ಸುಟ್ಟಿರುವ ಸ್ಥಿತಿಯಲ್ಲಿ ದೊರಕಿದೆ. ಇದರಿಂದ ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಅನುಮಾನ ಇನ್ನಷ್ಟು ಹೆಚ್ಚಾಗಿದೆ.
ಪತಿ ಅನಂತರಾಜು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಮೇ 12ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂರು ದಿನಗಳ ಬಳಿಕ ಪತ್ನಿ ಸುಮಾ ದೂರು ನೀಡಿದ್ದರು. ಪತ್ನಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಕೆ.ಆರ್.ಪುರ ನಿವಾಸಿ ರೇಖಾ ಹಾಗೂ ಇತರರನ್ನು ವಶಪಡಿಸಿಕೊಂಡಿದ್ದರು. ಆದರೆ ಆ ಬಳಿಕ ಬಿಜೆಪಿ ಮುಖಂಡನ ಸಾವಿಗೆ ಆತನ ಪತ್ನಿಯೇ ಕಾರಣ ಎಂದು ಬಂಧಿತ ಆರೋಪಿಗಳು ಹೇಳಿಕೆ ನೀಡಿದ್ದರು. ಹೀಗಾಗಿ ಪೊಲೀಸರು ಆತನ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅನಂತರಾಜು ಅವರ ಆತ್ಮಹತ್ಯೆ ವಿಷಯವನ್ನು ಪತ್ನಿ ಹಾಗೂ ಇತರರು ಮುಚ್ಚಿಡುವ ಸಲುವಾಗಿ ಮೃತದೇಹವನ್ನು ಕೆಳಗಿಳಿಸಿ ಹೃದಯಾಘಾತವಾಗಿದೆ ಎಂದು ಸ್ಥಳೀಯರಿಗೆ ಹೇಳಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಆತ್ಮಹತ್ಯೆಗೆ ಬಳಸಿದ ಶಾಲನ್ನು ಸುಟ್ಟು ಹಾಕುವಂತೆ ಮನೆ ಕೆಲಸಗಾರರಿಗೆ ಸುಮಾ ಸೂಚಿಸಿದ್ದರು ಎನ್ನಲಾಗಿದೆ.
ಕೆಲಸಗಾರ ನಿರ್ಜನ ಪ್ರದೇಶದಲ್ಲಿ ಶಾಲನ್ನು ಸುಟ್ಟು ಬಂದಿದ್ದು, ಮಳೆಯ ಕಾರಣದಿಂದಾಗಿ ಆ ಶಾಲು ಅರ್ಧ ಮಾತ್ರ ಸುಟ್ಟು ಹೋಗಿದ್ದು, ಇನ್ನರ್ಧ ಹಾಗೆಯೇ ಬಾಕಿ ಉಳಿದಿದೆ. ಇದರಿಂದಾಗಿ ಅರ್ಧ ಸುಟ್ಟ ಶಾಲು ಪೊಲೀಸರಿಗೆ ಲಭಿಸಿದೆ. ಇದರೊಂದಿಗೆ ಅನಂತರಾಜು ಮೃತಪಟ್ಟ ದಿನದಂದು ಯಾರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಮೂರು ದಿನ ಕಳೆದ ಬಳಿಕ ಪತ್ನಿ ಸುಮಾ ಪೊಲೀಸ್ ದೂರು ನೀಡಿದ್ದು, ಹಲವು ಗಂಟೆಯಾದರೂ ಅವರು ಮನೆಯ ಕೊಠಡಿ ಬಾಗಿಲು ತೆರೆಯದ ಕಾರಣ ನಕಲಿ ಕೀ ಬಳಸಿ ಕೊಠಡಿ ಬಾಗಿಲು ತೆರೆದಿದ್ದೆವು. ಈ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ತಿಳಿಸಿದ್ದರು. ಪತ್ನಿಯ ಈ ನಡೆ ಕೂಡಾ ಪೊಲೀಸರಿಗೆ ಅನುಮಾನ ಹೆಚ್ಚಲು ಕಾರಣವಾಗಿದೆ.
ಅನಂತರಾಜು ಸಾವಿನ ಬಗ್ಗೆ ಅನುಮಾನಗಳಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿಸಂಜೀವ್ ಪಾಟೀಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.