ಬನಹಟ್ಟಿ, ಮೇ 27 (DaijiworldNews/MS): ಸಲೂನ್ನಲ್ಲಿ ತಲೆ ಕೂದಲಿಗೆ ಬಣ್ಣಹಚ್ಚುವ ರೇಟ್ ವಿಚಾರವಾಗಿ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಮೇ.26ರ ಸಂಜೆ ನಡೆದಿದೆ. ಸಾಗರ ಅವಟಿ (22) ಕೊಲೆಯಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ.
ಅಸಂಗಿ ಗ್ರಾಮದ ಪ್ರಜ್ವಲ್ ಜೆಂಟ್ಸ್ ಪಾರ್ಲರ್ನಲ್ಲಿ ಬಂದಿದ್ದ ಸಾಗರ ಎಂಬ ಯುವಕ ತಲೆಗೂದಲಿಗೆ ಬಣ್ಣ ಹಚ್ಚಿಸೋಕೆ ಬಂದಿದ್ದ. ಸಲೂನ್ ಮಾಲೀಕ ಲಕ್ಷ್ಮಣ ಬಣ್ಣ ಹಚ್ಚೋದಕ್ಕೆ ಮುಂದಾಗಿದ್ದ. ಇದೇ ಸಂದರ್ಭದಲ್ಲಿ ಸದಾಶಿವ ನಾವಿ ಎಂಬ ಕ್ಷೌರಿಕ ಬೇರೊಬ್ಬ ಗ್ರಾಹಕನ ಕಟಿಂಗ್ ಮಾಡುತ್ತಿದ್ದ.
ಬಣ್ಣ ಹಚ್ಚೋದಕ್ಕೆ ೨೦ ರೂಪಾಯಿ ಕೊಡುವುದಾಗಿ ಲಕ್ಷ್ಮಣನಿಗೆ ಸಾಗರ ಹೇಳಿದ್ದ. ಇದನ್ನು ಕೇಳಿಸಿಕೊಂಡ ಸದಾಶಿವ ನಾವಿ ಜಗಳಕ್ಕೆ ಇಳಿದಿದ್ದ.ಈ ಹಿಂದೆಯೂ ಸದಾಶಿವ ನಾವಿಯನ್ನು ಸಾಗರ ರೇಗಿಸುತ್ತಿದ್ದ ಎಂದು ತಿಳಿದುಬಂದಿದೆ. ಇಬ್ಬರ ಜಗಳ ತಾರಕಕ್ಕೇರಿದಾಗ ತಾಳ್ಮೆ ಕಳೆದುಕೊಂಡ ಸದಾಶಿವ ಕತ್ತರಿಯಿಂದ ಸಾಗರನ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಕೂಡಲೆ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದಾಶಿವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.