ಬೆಂಗಳೂರು, ಮೇ 26 (DaijiworldNews/DB): ರಾಷ್ಟ್ರಕವಿ ಕುವೆಂಪು ಅವಹೇಳನ ಮತ್ತು ನಾಡಗೀತೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಅಕಾಶೆ ಕಾರ್ಕಳ ಅವರ ವಿರುದ್ದ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಲಾಗಿದೆ.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ದೂರು ನೀಡಿದ್ದಾರೆ. ನಾಡು ಕಂಡ ಹೆಮ್ಮೆಯ ಕವಿ ಕುವೆಂಪು. ಆದರೆ ಅವರ ವಿರುದ್ದ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ಲದೆ ಲಕ್ಷ್ಮಣ ಎಂಬುವವರು ಕೂಡಾ ಕುವೆಂಪು ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡುವಂತಹ ಬರಹಗಳನ್ನು ಇಬ್ಬರು ಬರೆದಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಇನ್ನು ಮರು ಪರಿಷ್ಕರಣೆ ಮಾಡಿದ ಪಠ್ಯವನ್ನು ಜಾರಿಗೊಳಿಸಬಾರದು ಎಂದು ರಾಜ್ಯದ ಸುಮಾರು 71ಕ್ಕೂ ಹೆಚ್ಚು ಮಂದಿ ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕನ್ನಡ ನಾಡಿನ ಅಸ್ಮಿತೆ, ಭಾಷೆಯ ಘನತೆಗೆ ಧಕ್ಕೆ ತರುವ ಕೆಲಸವನ್ನು ಈ ಸಮಿತಿ ಮಾಡಿದೆ. ಯಾವುದೇ ಕಾರಣ ನೀಡದೆ ನಾಡಿನ ಪ್ರಮುಖ ಸಾಹಿತಿಗಳ ಪಠ್ಯಗಳನ್ನು ಕೈ ಬಿಟ್ಟು ಆರೆಸ್ಸೆಸ್ ಸ್ಥಾಪಕ ಹಡಗೇವಾರ್, ಬನ್ನಂಜೆ ಗೋವಿಂದಾಚಾರ್ಯರು, ಶತಾವಧಾನಿ ಆರ್. ಗಣೇಶ್, ಶಿವಾನಂದ ಕಳವೆ ಅವರ ಪಠ್ಯಗಳನ್ನು ಸೇರಿಸಲಾಗಿದೆ. ಇದು ಒಪ್ಪುವಂತಹ ವಿಷಯವಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಕುಂ. ವೀರಭದ್ರಪ್ಪ, ವಿಜಯಾ, ವಿ.ಪಿ. ನಿರಂಜನಾರಾಧ್ಯ, ರಹಮತ್ ತರಿಕೆರೆ, ರಾಜೇಂದ್ರ ಚೆನ್ನಿ, ಟಿ.ಆರ್. ಚಂದ್ರಶೇಖರ್, ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಬಂಜಗೆರೆ ಜಯಪ್ರಕಾಶ್, ವಸಂತ ಬನ್ನಾಡಿ ಸೇರಿದಂತೆ 71ಕ್ಕೂ ಹೆಚ್ಚು ಮಂದಿ ಸಾಹಿತಿಗಳು ಈ ಪತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.