ನವದೆಹಲಿ, ಮೇ 26 (DaijiworldNews/DB): ಚೀನೀಯರಿಗೆ ಅಕ್ರಮವಾಗಿ ವೀಸಾ ಒದಗಿಸಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಮೇ 30ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ಲಭಿಸಿದೆ. ದೆಹಲಿ ನ್ಯಾಯಾಲಯವು ಅವರಿಗೆ ಮಧ್ಯಂತರ ರಕ್ಷಣೆ ಕಲ್ಪಿಸಿದೆ.
ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಮಧ್ಯಂತರ ರಕ್ಷಣೆಗೆ ಸೂಚನೆ ನೀಡಿದರು. ಕಾರ್ತಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಅವರು ಈ ಸೂಚನೆ ನೀಡಿದ್ದಾರೆ. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆಇದೇ ವೇಳೆ ಅವರು ನೋಟಿಸ್ ಜಾರಿಗೊಳಿಸಿದರು.
ಪಿ. ಚಿದಂಬರಂ ಗೃಹ ಸಚಿವರಾಗಿದ್ದ ಅವಧಿಯಲ್ಲಿ 2011ನೇ ಇಸವಿಯಲ್ಲಿ 263 ಚೀನೀ ಪ್ರಜೆಗಳಿಗೆ ವೀಸಾ ಕೊಡಿಸಿದ ಆರೋಪ ಕಾರ್ತಿ ಮೇಲಿತ್ತು. ಈ ಸಂಬಂಧ ಇಡಿಯು ಕಾರ್ತಿ ಮತ್ತು ಇತರರ ವಿರುದ್ದಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಪ್ರಕರಣ ದಾಖಲಿಸಿತ್ತು.