ನವದೆಹಲಿ, ಮೇ 26 (DaijiworldNews/DB): ವೇಶ್ಯಾವಾಟಿಕೆ ಕಾನೂನುಬಾಹಿರವಲ್ಲ. ಸ್ವ ಇಚ್ಚೆಯಿಂದ ಲೈಂಗಿಕ ಕಾರ್ಯಕರ್ತೆಯರಾಗಿ ದುಡಿಯುತ್ತಿರುವವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಈ ಸಂಬಂಧ ಪೊಲೀಸರಿಗೆ ಕೆಲವು ಸೂಚನೆಗಳನ್ನು ನೀಡಿದೆ. ಸ್ಡ ಇಚ್ಛೆಯಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡವರ ವಿಚಾರದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಿ ಪ್ರಕರಣ ದಾಖಲಿಸಬಾರದು. ಕಾನೂನಿನಡಿಯಲ್ಲಿ ಘನತೆ ಮತ್ತು ಸಮಾನ ರಕ್ಷಣೆಗೆ ಲೈಂಗಿಕ ಕಾರ್ಯಕರ್ತೆಯರು ಅರ್ಹರಾಗಿರುತ್ತಾರೆ. ಲೈಂಗಿಕ ಕಾರ್ಯಕರ್ತೆಯರು ವಯಸ್ಸಕರಾಗಿದ್ದು, ಒಪ್ಪಿಗೆ ಮೇರೆಗೆ ಈ ಕೆಲಸಕ್ಕೆ ಇಳಿದಿದ್ದಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು. ಆದರೆ ವೇಶ್ಯಾಗೃಹಗಳನ್ನು ನಡೆಸುವುದು ಕಾನೂನುಬಾಹಿರ. ಅಂತಹವುಗಳ ಮೇಲೆ ದಾಳಿಗಳಾದ ಸಂದರ್ಭದಲ್ಲಿ ವಯಸ್ಕ ಮತ್ತು ಒಪ್ಪಿಗೆಯ ವೇಶ್ಯಾವಾಟಿಕೆ ನಡೆಸುವ ಕಾರ್ಯಕರ್ತೆಯರನ್ನು ಬಂಧನಕ್ಕೆ ಒಳಪಡಿಸುವುದಾಗಲೀ, ದಂಡ ವಿಧಿಸುವುದಾಗಲೀ, ಕಿರುಕುಳ ನೀಡುವುದಾಗಲೀ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ಅಲ್ಲದೆ, ವೇಶ್ಯಾವಾಟಿಕೆಕಾರಣಕ್ಕಾಗಿಆಕೆಯಮಗುವನ್ನುಆಕೆಯಿಂದ ದೂರ ಮಾಡುವಂತಿಲ್ಲ. ಸಭ್ಯತೆ ಮತ್ತು ಘನತೆಯ ಹಕ್ಕು ಆಕೆಯ ಮಕ್ಕಳಿಗೂ ಇದೆ. ಆಕೆಯೊಂದಿಗೆ ಅಪ್ರಾಪ್ತ ಮಗು ಪತ್ತೆಯಾದಲ್ಲಿ ಅದನ್ನು ಮಾನವ ಕಳ್ಳ ಸಾಗಣೆ ಎಂದು ಭಾವಿಸಬಾರದು ಎಂಬುದಾಗಿ ಕೋರ್ಟ್ ಹೇಳಿದೆ.