ಬೆಂಗಳೂರು, ಮೇ 26 (DaijiworldNews/DB): ಬಿ.ವೈ. ವಿಜಯೇಂದ್ರ ಅವರು ಜನರಿಂದ ಆಯ್ಕೆಯಾಬೇಕೇ ಹೊರತು ಶಾಸಕರಿಂದಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈ ತಪ್ಪಿರುವುದರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರ ಕೇವಲ ಪರಿಷತ್ ಸದಸ್ಯರಾಗುವುದಕ್ಕೆ ಪಕ್ಷದಲ್ಲಿ ಯಾರೂ ಕೂಡಾ ಬಯಸುವುದಿಲ್ಲ. ಯಡಿಯೂರಪ್ಪನವರು ಹೋರಾಟದ ಬದುಕು ಕಂಡವರು. ಪಕ್ಷಕ್ಕಾಗಿ ದುಡಿದ ಅವರ ಮಗ ವಿಜಯೇಂದ್ರ ಜನರಿಂದಲೇ ಆಯ್ಕೆ ಮಾಡಿ ಮುಂದೆ ದೊಡ್ಡ ನಾಯಕರಾಗಬೇಕೆಂಬುದು ನಮ್ಮೆಲ್ಲರ ಆಶಯ. ವಿಜಯೇಂದ್ರ ಸೇರಿದಂತೆ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯಲಿದೆ ಎಂದರು.
ಬಿ.ವೈ. ವಿಜಯೇಂದ್ರ ಅಸೆಂಬ್ಲಿಗೆ ಸ್ಪರ್ಧಿಸುವುದರಿಂದ ಇತರ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಪರಿಷತ್ ಚುನಾವಣೆಗೆ ಅವರಿಗೆ ಟಿಕೆಟ್ ನೀಡಲಾಗಿಲ್ಲ. ಬಿಎಸ್ವೈ ಅವರು ಪಕ್ಷಕ್ಕೆ ದೊಡ್ಡ ಶಕ್ತಿ. ಅವರನ್ನು ಸೈಡ್ಲೈನ್ ಮಾಡಲಾಗುತ್ತಿದೆ ಎಂಬುದು ಕೇವಲ ಊಹಾಪೋಹ. ವಿಧಾನಸಭೆ ಚುನಾವಣೆಗೆ ಯಾರೆಲ್ಲಾ ಅರ್ಹರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ನಿಲುವು ಹೊಂದಿದೆ. ವಿಜಯೇಂದ್ರರಿಗೆ ಖಂಡಿತಾ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಜನರಿಂದಲೇ ಅವರೊಬ್ಬ ದೊಡ್ಡ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಅವರು ತಿಳಿಸಿದರು.