ಬೆಂಗಳೂರು, ಮೇ 26 (DaijiworldNews/MS): ನೀರಿನ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರು ಸರ್ಜಾಪುರ ರಸ್ತೆಯಲ್ಲಿನ ಶ್ವೇತಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಎದುರು ನಡೆದಿದೆ.
ನೀರನ್ನು ಖಾಲಿ ಮಾಡಿದ ಬಳಿಕ ಟ್ಯಾಂಕರ್ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಹಿಂದೆ ಇದ್ದ ಬಾಲಕನನ್ನು ಗಮನಿಸದೇ ಚಾಲಕ ಟ್ಯಾಂಕರ್ ಹಿಂದೆ ತೆಗೆದಿದ್ದಾನೆ. ಟ್ಯಾಂಕರ್ ಚಕ್ರಕ್ಕೆ ಸಿಲುಕಿದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಮೂರು ವರ್ಷದ ಪ್ರತಿಷ್ಠ ಎಂದು ಗುರುತಿಸಲಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ HSR ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.