ಮೈಸೂರು, ಮೇ 26 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ತಪ್ಪಿನಿಂದಾಗಿ ಎಲ್ಲೋ ಬರೆದುಕೊಂಡು ಕುಳಿತಿದ್ದ ಪ್ರತಾಪ್ ಸಿಂಹನಿಗೆ ಸಂಸದನಾಗುವ ಅವಕಾಶ ಸಿಕ್ಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಿದಂತೆ ಪ್ರತಾಪ್ ಸಿಂಹ ಅವರಿಗೆ ಎರಡು ಬಾರಿ ಸಂಸದನಾಗುವ ಅವಕಾಶ ಸಿಕ್ಕಿದೆ. ಅವರಿಗೆ ಏನೂ ಗೊತ್ತಿಲ್ಲ. ಅವರಿಗೆ ಸಂಸದನಾಗಿ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ಪ್ರಜ್ಞೆ ಇಲ್ಲ. ಮೈಸೂರು ಸಂಸ್ಥಾನದವರು ಟಿಪ್ಪು ಸಮಾಧಿಯನ್ನು ಕಾಪಾಡುತ್ತಿದ್ದಾರೆ. ಆದರೆ ಟಿಪ್ಪು ಮೈಸೂರಿನ ಹುಲಿಯಲ್ಲ, ನಿಜವಾದ ಮೈಸೂರಿನ ಹುಲಿ ಕೃಷ್ಣರಾಜ ಒಡೆಯರ್ ಎನ್ನುವ ಮೂಲಕ ಟಿಪ್ಪು ಮತ್ತು ಕೃಷ್ಣರಾಜ ಒಡೆಯರ್ ಅವರಿಗೂ ತಂದಿಡುವ ಕೆಲಸವನ್ನು ಪ್ರತಾಪ್ಸಿಂಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಟಿಪ್ಪು ಸುಲ್ತಾನ್ ಅವರನ್ನು ಹುಲಿಯ ಜೊತೆ ತೋರಿಸಿದ್ದಾರೆ. ಹಿಂದಿನ ಕಾಲದಲ್ಲಿ ಫೋಟೋ ತೆಗೆಯಲು ಫೋಟೋಗ್ರಫಿ ಇರಲಿಲ್ಲ. ಹಾಗಾದರೆ ಯಡಿಯೂರಪ್ಪನವರನ್ನು ರಾಜಾಹುಲಿ ಎನ್ನುತ್ತಾರೆ. ಅವರೇನು ಕಾಡಿನಲ್ಲಿದ್ದರಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಯಾವುದೇ ಗಲಾಟೆ ಉಂಟಾಗಿಲ್ಲ. ಎಲ್ಲರೂ ಸೇರಿ ಕುಳಿತು ಚರ್ಚಿಸಿ ಶರವಣವರಿಗೆ ಟಿಕೆಟ್ ನೀಡಲಾಗಿದೆ ಎಂದವರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.