ಶ್ರೀನಗರ, ಮೇ 26 (DaijiworldNews/DB): ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಒದಗಿಸಿದ ಪ್ರಕರಣದಲ್ಲಿ ದೆಹಲಿ ಕೋರ್ಟ್ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಿಷೇಧಿತ ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಪರ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಕಾಶ್ಮೀರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಶ್ರೀನಗರದ ಕೆಲವು ಕಡೆಗಳಲ್ಲಿ ಆತನ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಲಾಲ್ ಚೌಕ್ ಬಳಿಯಿರುವ ಮೈಸುಮಾದಲ್ಲಿ ಇರುವ ಆತನ ನಿವಾಸದ ಬಳಿಯೂ ಬೆಂಬಲಿಗರು ಸೇರಿ ಘೋಷಣೆ ಕೂಗಿದ್ದಾರೆ. ಈ ವೇಳೆ ಆತನ ಪರ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿದ್ದರು. ಘಟನೆಗೆ ಕಾರಣವಾದ ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸು ನೆರವು ಒದಗಿಸಿದ ಆರೋಪದ ಹಿನ್ನೆಲೆಯಲ್ಲಿ ಆತನಿಗೆ ಮರಣ ದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ಸಂಸ್ಥೆ ಒತ್ತಾಯಿಸಿತ್ತು. ಮೇ 19ರಂದು ಮಲಿಕ್ ದೋಷಿ ಎಂದು ಪ್ರಕಟಿಸಿದ್ದ ಕೋರ್ಟ್, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.