ಬೆಂಗಳೂರು, ಮೇ 26 (DaijiworldNews/DB): ಚಾರ್ಜ್ಶೀಟ್ ಸಲ್ಲಿಕೆ ಒಂದು ಕಾನೂನು ಪ್ರಕ್ರಿಯೆ. ಅದಕ್ಕೆ ಹೆದರುವ ಅಗತ್ಯವೇ ಬರುವುದಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ನಿರಂತರ ಆದಾಯ ಹೆಚ್ಚಳ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಅಧಿಕಾರಿಗಳು ಗುರುವಾರ ದೆಹಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಾರ್ಜ್ಶೀಟ್ನಲ್ಲಿ ಏನಿದೆ ಎಂಬುದು ನಮಗಾಗಲೀ, ನಿಮಗಾಗಲೀ ಗೊತ್ತಿಲ್ಲ. ರಾಜಕೀಯ ಪ್ರೇರಿತವಾಗಿ ನಮ್ಮ ವಿರುದ್ದ ಹಗೆ ಸಾಧಿಸುವುದು ನಡೆಯುತ್ತಲೇ ಇರುತ್ತದೆ. ಆದರೆ ಅದಕ್ಕೆ ನಾವು ಹೆದರಿ ಕುಳಿತುಕೊಳ್ಳುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ವಕೀಲರ ಜೊತೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ನಮ್ಮ ವಿರುದ್ದ ಏನೇ ಷಡ್ಯಂತ್ರಗಳು ನಡೆದರೂ ಅದನ್ನು ಎದುರಿಸಲು ನಾವು ಸಿದ್ದರಿದ್ದೇವೆ. ನಾಲ್ಕು ವರ್ಷಗಳಿಂದ ಇಂತಹ ವಿಚಾರಣೆಗಳು ನಡೆಯುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಸ್ವಾಯತ್ತ ಸಂಸ್ಥೆಗಳಾದ ಐಟಿ, ಸಿಬಿಐ, ಇಡಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡುವುದನ್ನು ಮರೆತಿವೆ. ನ್ಯಾಯಾಲಯಗಳ ಮೇಲೆಯೂ ಒತ್ತಡ ಹಾಕುವ ಕೆಲಸ ಆಗುತ್ತಿದೆ. ಹೀಗಾದಲ್ಲಿ ನ್ಯಾಯ ನಿರೀಕ್ಷೆ ಸಾಧ್ಯವಿದೆಯೇ ಎಂದವರು ಪ್ರಶ್ನಿಸಿದರು.