ಕೊಪ್ಪಳ, ಮೇ 26 (DaijiworldNews/DB): ತಡರಾತ್ರಿ ಊಟ ಖಾಲಿಯಾಗಿದೆ ಎಂದಿದ್ದಕ್ಕೆ ಆಕ್ರೋಶಗೊಂಡ ದುಷ್ಕರ್ಮಿಗಳು ಅಡುಗೆ ಸಿಬಂದಿಯನ್ನು ಕೂಡಿ ಹಾಕಿ ಡಾಬಾಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಆನೆಗೊಂದಿ ಬಳಿಯ ಡಾಬಾದಲ್ಲಿ ಬುಧವಾರ ರಾತ್ರಿ 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ಡಾಬಾಗೆ ಆಗಮಿಸಿ ಊಟ ಕೇಳಿದ್ದಾರೆ. ತಡರಾತ್ರಿಯಾದ್ದರಿಂದ ಊಟ ಖಾಲಿಯಾಗಿದ್ದು, ಅಡುಗೆ ಸಿಬಂದಿ ಊತ ಇಲ್ಲವೆಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪರಿಚಿತರು ಅಡುಗೆ ಸಿಬಂದಿ ಒಳಗಿರುವಾಗ ಹೊರಗಿನಿಂದ ಚಿಲಕ ಹಾಕಿದ್ದಾರೆ. ಬಳಿಕ ನೀರಿನ ಸಂಪರ್ಕ ಕಡಿತಗೊಳಿಸಿ ಡಾಬಾಕ್ಕೆ ಬೆಂಕಿ ಹಂಚಿದ್ದಾರೆ. ಗುಡಿಸಲು ಮಾದರಿಯ ಡಾಬಾದ 11 ಕೊಠಡಿಗಳು ಬೆಂಕಿಯಿಂದ ಸುಟ್ಟು ಹೋಗಿವೆ.
ಘಟನೆಯಿಂದ ಆತಂಕಗೊಂಡ ಅಡುಗೆ ಸಿಬಂದಿ ತತ್ಕ್ಷಣ ಆನೆಗೊಂದಿ ಗ್ರಾಮಸ್ಥರಿಗೆ ಫೋನ್ ಮಾಡಿ ಕರೆದಿದ್ದಾರೆ. ಕೂಡಲೇ ಆಗಮಿಸಿದ ಗ್ರಾಮಸ್ಥರು ಬೆಂಕಿ ನಂದಿಸಿ ಸಿಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಈ ವೇಳೆಗಾಗಲೇ ಡಾಬಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.