ಬೆಂಗಳೂರು: ಮೇ 26 (DaijiworldNews/MS): ದಲಿತ ಮುಖ್ಯಮಂತ್ರಿ ಎಂಬ ಪದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಬಿಜೆಪಿಯೂ, ಚುನಾವಣೆ ಹತ್ತಿರ ಬರುತ್ತಿದ್ದಂತೆ ದಲಿತರ ಪರ ಒಲವು ತೋರಿಸುತ್ತಿರುವ ಸಿದ್ದರಾಮಯ್ಯ ಅವರೇ2023 ರಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡುವ ತಾಕತ್ತು ಇದೆಯೇ ಎಂದು ಸವಾಲ್ ಹಾಕಿದೆ.
ನನಗಿಂತ ದೊಡ್ಡ ದಲಿತ ಯಾರಿದ್ದಾರೆ ಎನ್ನುವ ಸಿದ್ದರಾಮಯ್ಯ, ಪಕ್ಷ ಸಂಘಟಿಸಿದ್ದು ನಾನು, ಅಧಿಕಾರ ಬೇರೆಯವರಿಗೆ ಏಕೆ ಬಿಟ್ಟುಕೊಡಬೇಕು ಎನ್ನುವ ಡಿಕೆಶಿ ಒಟ್ಟಾರೆಸಿಎಂ ಪದವಿ ಕನಸು ಕಾಣುತ್ತಿರುವ ಇಬ್ಬರು ನಾಯಕರು ಪರಮೇಶ್ವರ್ ಅವರನ್ನು ಗೆಲ್ಲಲು ಬಿಡುತ್ತಾರೆಯೇ ಹೀಗಾಗಿ ಪರಮೇಶ್ವರ್ ಅವರೇ 2023 ರಲ್ಲೂ ನಿಮ್ಮ ಸೋಲು ನಿಶ್ಚಿತ! ಎಂದು ಬಿಜೆಪಿ ಹೇಳಿದೆ.
ಪರಮೇಶ್ವರ್ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ ಸಿದ್ದರಾಮಯ್ಯ, ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ. 2013 ರ ಇತಿಹಾಸ 2023 ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ, ಪರಮೇಶ್ವರ್ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದು ಬಿಜೆಪಿ ಹೇಳಿದೆ.