ಬೆಂಗಳೂರು, ಮೇ 26 (DaijiworldNews/DB): ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರ ಅರ್ಹತೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಬಿಡುಗಡೆಗೊಳಿಸಿದ್ದಾರೆ.
ವಿಜ್ಞಾನ ಓದಿರುವ ಅವರು ಮುಖ್ಯವಾಗಿ ಗಣಿತದಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ. ಬೆಂಗಳೂರಿನ ಕಾಲೇಜುಗಳಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಹವ್ಯಾಸಿ ಬರಹಗಾರರಾಗಿದ್ದು, ಪತ್ರಿಕೆಗಳಲ್ಲಿ ಹಲವು ಅಂಕಣಗಳನ್ನು ಬರೆದಿದ್ದಾರೆ. ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ 35 ಪುಸ್ತಕಗಳು ಪ್ರಕಟಗೊಂಡಿವೆ.
ಐಐಟಿ, ಸಿಇಟಿ, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾರೆ. ಇದಲ್ಲದೆ ಗಣಿತಕ್ಕಾಗಿಯೇ ಇರುವ ’ಸೂತ್ರ’ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾನು ಐಐಟಿ, ಸಿಇಟಿ ಪ್ರೊಫೆಸರ್ ಎಂಬುದಾಗಿ ಸಚಿವರೊಬ್ಬರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವರು ಮಾತನಾಡುವ ಭರದಲ್ಲಿ ನನ್ನನ್ನು ಪ್ರೊಫೆಸರ್ ಎಂದಿರಬಹುದು. ಆದರೆ ನಾನು ಪ್ರೊಫೆಸರ್ ಅಲ್ಲ. ಐಐಟಿ, ಸಿಇಟಿಗೆ ತರಬೇತಿ ನೀಡುತ್ತೇನೆ ಎಂದಿದ್ದಾರೆ.