ಕಲಬುರಗಿ, ಮೇ 26 (DaijiworldNews/DB): ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಬೀದರ್ನ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿನ ಪರೀಕ್ಷಾ ಕೇಂದ್ರವನ್ನೇ ರದ್ದು ಮಾಡಲಾಗಿದೆ. ಅಲ್ಲದೆ, ವಿವಿಧ ಕಾಲೇಜುಗಳಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಎಂಪಿಸಿ ಮಾಡಲಾಗಿದೆ.
ಗುಲ್ಬರ್ಗಾ ವಿವಿಯ ಕುಲಸಚಿವೆ ಡಾ. ಮೇದಾವಿನಿ ಕಟ್ಟಿ ಅವರು ಈ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದಾಗ ಕಿರಿಯ ಮೇಲ್ವಿಚಾರಕರು, ಕಾಲೇಜು ಸಿಬಂದಿ ಮತ್ತು ಏಳು ಮಂದಿ ವಿದ್ಯಾರ್ಥಿಗಳು ಸೇರಿ ಸಾಮೂಹಿಕ ನಕಲು ಮಾಡುತ್ತಿರುವುದು ಕಂಡು ಬಂದಿತ್ತು. ಇದರಿಂದ ಸಿಡಿಮಿಡಿಗೊಂಡ ಅವರು ಕೂಡಲೇ ಪರೀಕ್ಷಾ ಕೇಂದ್ರವನ್ನು ರದ್ದುಗೊಳಿಸಲು ಆದೇಶಿಸಿದರು. ರದ್ದಾದ ಪರೀಕ್ಷಾ ಕೇಂದ್ರದಲ್ಲಿ ನಡೆಸಬೇಕಾದ ಮುಂದಿನ ಪರೀಕ್ಷೆಗಳನ್ನು ಬಿವಿಬಿ ಪರೀಕ್ಷಾ ಕೇಂದ್ರದಲ್ಲಿ ನಡೆಸಲು ಸೂಚಿಸಿರುವುದಾಗಿ ವರದಿಯಾಗಿದೆ.
ಇನ್ನು ನಕಲು ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಎಂಪಿಸಿ ಮಾಡಲಾಗಿದೆ. ಬೀದರ್ನ ಚಂದ್ರಶೇಖರ ಪದವಿ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಪುಸ್ತಕ ಇಟ್ಟುಕೊಂಡು ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ಗಮನಿಸಿದ ಕುಲಸಚಿವರು ಅವರನ್ನೂ ಎಂಪಿಸಿ ಮಾಡಿದರು. ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ ಐದನೇ ಸೆಮಿಸ್ಟರ್ ಭೌತಶಾಸ್ತ್ರ ವಿಷಯದಲ್ಲಿ ವಿದ್ಯಾರ್ಥಿಯೋರ್ವ ನಕಲು ಮಾಡಿ ಸಿಕ್ಕಿ ಬಿದ್ದಿದ್ದಾನೆ. ಆತನನ್ನೂ ಎಂಪಿಸಿ ಮಾಡಲಾಗಿದೆ.