ವಾರಾಣಸಿ, ಮೇ 25 (DaijiworldNews/DB): ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ತ್ವರಿತ ನ್ಯಾಯಾಲಯಕ್ಕೆ ಜಿಲ್ಲಾ ನ್ಯಾಯಾಲಯವು ವರ್ಗಾಯಿಸಿದೆ.
ಮೇ 30ರಂದು ತ್ವರಿತ ನ್ಯಾಯಾಲಯವು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಸರ್ಕಾರದ ಪರ ವಕೀಲ ರಾಣಾ ಸಂಜೀವ್ ಸಿಂಗ್ ಅವರು ಬುಧವಾರ ಹೇಳಿರುವುದಾಗಿ ವರದಿಯಾಗಿದೆ.
ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿಶ್ವ ವೇದಿಕ್ ಸನಾತನ ಸಂಘದ ಪರವಾಗಿ ಸಂಘದ ಅಧ್ಯಕ್ಷ ಜಿತೇಂದ್ರ ಸಿಂಹ ಬಿಸೇನ ಅವರ ಪತ್ನಿ ಕಿರಣ್ ಸಿಂಗ್, ಸಂಘದ ಪ್ರಧಾನ ಕಾರ್ಯದರ್ಶಿ ಸೇರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶಿವಲಿಂಗ ಪತ್ತೆಯಾದ ಮಸೀದಿ ಆವರಣದೊಳಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ ಹೇರಬೇಕು. ಆವರಣವನ್ನು ನಮಗೆ ಬಿಟ್ಟು ಕೊಡಬೇಕು. ಅಲ್ಲಿ ಶಿವಲಿಂಗಕ್ಕೆ ಪೂಜೆ, ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂಬುದಾಗಿಯೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.