ನವದೆಹಲಿ, ಮೇ 25 (DaijiworldNews/DB): ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಭಾಸ್ಕರರಾಮನ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಪಿಎಂಎಲ್ಎ ಅಡಿ ಬುಧವಾರ ಪ್ರಕರಣ ದಾಖಲಿಸಿದೆ.
ಪಿ. ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ 2011ರಲ್ಲಿ 263 ಮಂದಿ ಚೀನೀ ಪ್ರಜೆಗಳಿಗೆ ಕಾನೂನುಬಾಹಿರವಾಗಿ ವೀಸಾ ನೀಡಿದ ಪ್ರಕರಣ ಇದಾಗಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯವು ಅವರ ವಿರುದ್ದ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿದೆ.
ಕಾರ್ತಿ ಭಾರತಕ್ಕೆ ಆಗಮಿಸಿದ 16 ಗಂಟೆಗಳ ಒಳಗೆ ಸಿಬಿಐ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ನಿರ್ದೇಶಿಸಿರುವುದರಿಂದ ಅವರಿಗೆ ಸಮನ್ಸ್ ನೀಡಿಲ್ಲ. ಹಾಜರಾಗಲು ತಪ್ಪಿದ್ದಲ್ಲಿ ಸಮನ್ಸ್ ನೀಡಬಹುದು ಎನ್ನಲಾಗಿದೆ. ಕಾರ್ತಿ ಚಿದಂಬರಂ ಅವರನ್ನು ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ಇಂದು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ. 50 ಲಕ್ಷ ರೂ. ಕಿಕ್ಬ್ಯಾಕ್ ನೀಡಲಾಗಿದೆ ಎಂಬ ಆರೋಪದಡಿ ಕಾರ್ತಿ ಅವರ ನಿಕಟವರ್ತಿ ಎಸ್. ಭಾಸ್ಕರ್ ರಾಮನ್ ಅವರನ್ನು ಮೇ 17ರಂದು ಸಿಬಿಐ ಬಂಧಿಸಿತ್ತು.