ಬೆಂಗಳೂರು, ಮೇ 25 (DaijiworldNews/DB): ಸರ್ಕಾರಿ ವಿಚಾರಗಳಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು. ಅಲ್ಲದೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಕೆಪಿಸಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿ ಮತ್ತು ಕೆಲ ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನಿಸುವುದಿಲ್ಲ. ಭಾವನಾತ್ಮಕ ವಿಷಯಗಳನ್ನು ಅವರು ಮನೆಯಲ್ಲೇ ಇಟ್ಟುಕೊಳ್ಳಲಿ. ಆದರೆ ಬೇರೆಯವರ ಮೇಲೆ ಅದನ್ನು ಹೇರಿಕೆ ಮಾಡಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ತಪ್ಪು. ರಾಜ್ಯವನ್ನು ಬಿಜೆಪಿ ಸರ್ಕಾರ ಕೊಲ್ಲುತ್ತಿದೆ. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಆಪಾದಿಸಿದರು.
ಸರ್ಕಾರದ ವಿಚಾರದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜರಾಯಿ ಇಲಾಖೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ. ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಸಂಘಟನೆಗಳ ಮೇಲೆ ಸರ್ಕಾರ ಕೂಡಲೇ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದರು.
ನಾವೂ ಹೋರಾಟ ಮಾಡುತ್ತೇವೆ ಎಂದು ಹೇಳಿಕೊಂಡು ನನಗೆ ಅನೇಕ ಮಂದಿ ಕರೆ ಮಾಡುತ್ತಿದ್ದಾರೆ. ಆದರೆ ರಾಜ್ಯದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ ಎಂಬ ಕಾರಣ ನೀಡಿ ನಾನೇ ಅವರನ್ನು ಸಮಾಧಾನಪಡಿಸುತ್ತೇನೆ. ಭವಿಷ್ಯ ಹೇಳುವವರಿಗೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಅದನ್ನು ಸಾರ್ವಜನಿಕಗೊಳಿಸಿ ಗೊಂದಲ ಸೃಷ್ಟಿಸುವವರ ನಡೆ ಖಂಡನೀಯ. ಸರ್ಕಾರ ತತ್ಕ್ಷಣ ಮಧ್ಯ ಪ್ರವೇಶಿಸಿ ಅಂತಹವರನ್ನು ಬಂಧಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ಇತಿಹಾಸ ತಿರುಚಿ ರಾಜಕೀಯ ಅಜೆಂಡಾವನ್ನು ಪಠ್ಯಕ್ರಮದಲ್ಲಿ ಹೇರುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ಯಾವುದೇ ಪ್ರಯತ್ನ ಕೆಲ ಸಮಯದವರೆಗೆ ಇರಬಹುದೇ ಹೊರತು ಇತಿಹಾಸ ಬದಲಾವಣೆ ಅಸಾಧ್ಯ. ದೇಶದ ಯಾವುದೇ ರಾಜ್ಯದಲ್ಲಿ ಜಾರಿಗೊಳಿಸಲಾಗದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ತನ್ನ ಹಾಗೂ ಸಂಘಟನೆಗಳ ವಿಚಾರಗಳನ್ನು ಮಕ್ಕಳ ತಲೆಯಲ್ಲಿ ತುಂಬಿಸಲು ಹೊರಟಿದೆ. ಆದರೆ ಜನರೇ ಸರ್ಕಾರಕ್ಕೆ ಮುಂದೆ ಶಿಕ್ಷೆ ನೀಡುತ್ತಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.