ದೆಹಲಿ, ಮೇ 25 (DaijiworldNews/MS): ರಾಷ್ಟ್ರಗೀತೆಯಾದ ಜನಗಣಮನದಂತೆಯೇ ವಂದೇ ಮಾತರಂಗೂ ಸ್ಥಾನಮಾನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದು, ‘ವಂದೇ ಮಾತರಂ ಗೀತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ್ದು ಅದನ್ನು ಗೌರವಿಸಬೇಕು ಮತ್ತು ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ನೀಡಬೇಕು ಎಂದು ಹೇಳಿದ್ದಾರೆ.
ವಂದೇ ಮಾತರಂಗೆ ಸಮಾನ ಸ್ಥಾನಮಾನ ನೀಡುವುದಕ್ಕೆ ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಸ್ಪೂರ್ತಿ ಎಂದು ಅವರು ಹೇಳಿದ್ದಾರೆ.ಪ್ರತಿ ಕೆಲಸದ ದಿನದಂದು ಎಲ್ಲಾ ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಗೀತೆ ಮತ್ತು 'ವಂದೇ ಮಾತರಂ' ಎರಡನ್ನೂ ನುಡಿಸುವಂತೆ ಮತ್ತು ಹಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೋಡಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಂದೇ ಮಾತರಂ' ಭಾರತದ ಇತಿಹಾಸ, ಸಾರ್ವಭೌಮತೆ, ಏಕತೆ ಮತ್ತು ಹೆಮ್ಮೆಯ ಸಂಕೇತವಾಗಿದ್ದು ಯಾವುದೇ ನಾಗರಿಕರು ಗುಟ್ಟಾಗಿ ಇಲ್ಲವೇ ಬಹಿರಂಗವಾಗಿ ಅಗೌರವ ತೋರಿದರೆ ಅದು ಸಮಾಜ ವಿರೋಧಿ ಚಟುವಟಿಕೆ ಮಾತ್ರವಲ್ಲದೆ ನಮ್ಮೆಲ್ಲಾ ಹಕ್ಕು ಮತ್ತು ಅಸ್ತಿತ್ವಕ್ಕೆ ವಿನಾಶಕಾರಿಯಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.