ಬೆಂಗಳೂರು, ಮೇ 25 (DaijiworldNews/MS): ಸಿದ್ದರಾಮಯ್ಯ ಅವರು , ನೀವು ಶ್ರಮ ವಹಿಸಿ ಮಾಡಿದ ಅಡುಗೆ ತಿಂದು ಮುಗಿಸುವುದು ಶತಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕುರಿತು ರಾಜ್ಯ ಬಿಜೆಪಿ ಘಟಕ ಸರಣಿ ಟ್ವೀಟ್ ಮಾಡಿ ಲೇವಡಿ ಮಾಡಿದೆ.
ತಿಹಾರ್ ಜೈಲಿನಿಂದ ದೊಡ್ಡ ಮೆರವಣಿಗೆ ಮಾಡಿಕೊಂಡು ಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದು ಎರಡು ವರ್ಷ ಕಳೆದರೂ ಪದಾಧಿಕಾರಿಗಳ ಪಟ್ಟಿಯನ್ನು ಭರ್ತಿ ಮಾಡಲು ಡಿ.ಕೆ.ಶಿವಕುಮಾರ್ ಅವರಿಂದ ಸಾಧ್ಯವಾಗಿರಲಿಲ್ಲ. ಈಗ ಉಪಾಧ್ಯಕ್ಷರ ಸ್ಥಾನದ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೂಚಿಸಿದ ಹೆಸರುಗಳಿವೆ. ಶಿವಕುಮಾರ್ ಅಷ್ಟೊಂದು ಅಸಹಾಯಕ ಆಗಿದ್ದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ. ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ, ಪಕ್ಷ ಕಟ್ಟಿರುವುದು ನಾನು ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಳ್ಳುತ್ತಿದ್ದಾರೆ. ಎದುರಾಳಿ ಬಲಗೊಳ್ಳುತ್ತಿದ್ದಾನೆ ಅಂದರೆ ಡಿಕೆಶಿ ಅಸಹಾಯಕ ಆಗಿದ್ದಾರೆಂದರ್ಥವೇ? ಎಂದು ಕೆಣಕಿದೆ. ಅಡುಗೆ ನಾನು ರೆಡಿ ಮಾಡಿದ್ದು, ಬೇರೆಯವರು ಬರೇ ತಿನ್ನುವುದಕ್ಕಾ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಡಿಕೆಶಿ ಅವರೇ, ನೀವು ಬರೇ ಇಂತಹ ಮಾತಿನ ಬಾಣ ಎಸೆಯಬೇಕಷ್ಟೇ. ಸಿದ್ದರಾಮಯ್ಯ ನೀವು ಶ್ರಮವಹಿಸಿ ಮಾಡಿದ ಅಡುಗೆ ತಿಂದು ಮುಗಿಸುವರು ಎಂದು ವ್ಯಂಗ್ಯವಾಡಿದೆ.
ತಮ್ಮ ಪರಮಾಪ್ತ ಎಂ.ಬಿ.ಪಾಟೀಲರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ. ಅದೇ ಎಂ.ಬಿ.ಪಾಟೀಲರು ಕೆಪಿಸಿಸಿ ಅಧ್ಯಕ್ಷರನ್ನೇ ಸಾರ್ವಜನಿಕ ವಲಯದಲ್ಲಿ, ಮಾಧ್ಯಮದವರ ಮುಂದೆ ಪ್ರಶ್ನಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇವಲ ಅಲಂಕಾರಿಕವೇ? ಎಂದು ಶಿವಕುಮಾರ್ ಗೆ ಪ್ರಶ್ನಿಸಿದೆ.
ಒಂದು ವಾರದಲ್ಲಿ ಎರಡು ಬಾರಿ ದೆಹಲಿ ದಂಡಯಾತ್ರೆ, ಚಿಂತನ ಶಿಬಿರದಲ್ಲಿ ಒಗ್ಗಟ್ಟಿನ ಮಂತ್ರ ಜಪ. ಇಷ್ಟೆಲ್ಲಾ ಆದರೂ ಡಿಕೆಶಿ ಅವರಿಗೆ ಹಿರಿಯ ನಾಯಕ ಎಸ್ಆರ್ಪಿ ಅವರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಹಠವೇ ಅಂತಿಮವಾಯಿತು. ಡಿಕೆಶಿ ಅವರೇ, ನೀವು ನಾಮಕಾವಸ್ಥೆ ಅಧ್ಯಕ್ಷರೇ? ಎಂದು ಬಿಜೆಪಿ ಕೇಳಿದೆ.