ಬೆಂಗಳೂರು, ಮೇ 25 (DaijiworldNews/DB): ವಿಜಯೇಂದ್ರನಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿದ್ದು, ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿರುವ ಬಗ್ಗೆ ಅನಗತ್ಯ ಮಾತು ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ವಿಜಯೇಂದ್ರನಿಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿರುವ ಬಗ್ಗೆ ವಿಶೇಷ ಅರ್ಥ ಹುಡುಕುವ ಅಗತ್ಯವಿಲ್ಲ. ಅವರಿಗೆ ಬೇರೆ ಅವಕಾಶಗಳನ್ನು ಹೈಕಮಾಂಡ್ ನೀಡಲಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಈಗಲೇ ಚರ್ಚೆ ಅನಗತ್ಯ. ಸಂದರ್ಭ ಬಂದಾಗ ಆ ಬಗ್ಗೆ ಮಾತನಾಡೋಣ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಮಹತ್ತರ ಬದಲಾವಣೆಗಳು ಪಕ್ಷದಲ್ಲಿ ನಡೆಯುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಜಯೇಂದ್ರರಿಗೆ ಟಿಕೆಟ್ ತಪ್ಪುವಲ್ಲಿ ಬಿ.ಎಲ್. ಸಂತೋಷ್ ಪಾತ್ರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೇನು ಸಂಬಂಧ ಇಲ್ಲ. ಇವೆಲ್ಲ ಮಾಧ್ಯಮಗಳು ಹಬ್ಬಿಸುತ್ತಿರುವ ಸುದ್ದಿಯಾಗಿದೆ ಎಂದರು.