ಮೈಸೂರು, ಮೇ 25 (DaijiworldNews/DB): ಪಠ್ಯಪುಸ್ತಕ ಮುದ್ರಣ ಈಗಾಗಲೇ ಪೂರ್ಣಗೊಂಡಿರುವ ಕಾರಣ ದೇವನೂರು ಮಹಾದೇವ ಅವರ ಬರಹವನ್ನು ಕೈಬಿಡುವುದು ಅಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬರೆದ ಬರಹವನ್ನು ಪಠ್ಯದಿಂದ ಕೈಬಿಡುವಂತೆ ಈಗಾಗಲೇ ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ. ಆದರೆ ಈಗಾಗಲೇ ಪಠ್ಯ ಪುಸ್ತಕ ಮುದ್ರಣ ಪೂರ್ಣಗೊಂಡಿರುವ ಕಾರಣ ಅವರ ಬರಹ ಕೈ ಬಿಡುವುದು ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ ಪುಸ್ತಕ ಮಕ್ಕಳ ಕೈ ಸೇರಲಿದೆ. ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯ ಇದ್ದರೂ, ಈ ವಿಚಾರವನ್ನು ದೇವನೂರು ಅವರಿಗೆ ಮನವರಿಕೆ ಮಾಡಲಾಗುವುದು ಎಂದರು.
ಬ್ರಿಟಿಷರು ತಯಾರಿಸಿದ ಪಠ್ಯವನ್ನು ಬದಲಾವಣೆ ಮಾಡಿ ರಾಷ್ಟ್ರೀಯತೆಯನ್ನು ಸೇರಿಸಲಾಗಿದೆ. ಪರಿವರ್ತನೆ ಜಗದ ನಿಯಮ. ಬ್ರಿಟಿಷರ ಕಾಲವನ್ನೇ ಮುಂದುವರಿಸುವ ಪರಿಪಾಠ ಬಿಟ್ಟು ನಮ್ಮತನವನ್ನು ರೂಢಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪಠ್ಯ ಪರಿಷ್ಕರಣೆ ಮಾಡಲಾಗಿದೆ ಎಂದವರು ತಿಳಿಸಿದರು.