ನವದೆಹಲಿ, ಮೇ 24 (DaijiworldNews/HR): ಮೊದಲ ಡೋಸ್ ಲಸಿಕೆಯನ್ನು 15-18ನೇ ವಯಸ್ಸಿನ ಶೇ 80 ರಷ್ಟು ಮಂದಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವೀಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ದೇಶದಲ್ಲಿ ಇದುವರೆಗೆ 192.52 ಕೋಟಿ ಡೋಸ್ ಲಸಿಕೆ ಹಾಕಲಾಗಿದ್ದು, 15-18 ವಯಸ್ಸಿನವರಿಗೆ ಜನವರಿಯಿಂದ ಲಸಿಕೆ ನೀಡಲು ಆರಂಭಿಸಿ ಇಲ್ಲಿಯ ತನಕ 5.92 ಕೋಟಿ ಮೊದಲ ಡೋಸ್, 12-14 ವಯೋಮಾನದವರಿಗೆ ಮಾರ್ಚ್ 16ರಿಂದ ಆರಂಭವಾದ ಅಭಿಯಾನದಲ್ಲಿ ಇಲ್ಲಿಯವರೆಗೆ 3.30 ಕೋಟಿ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ಭಾರತ ಜಗತ್ತಿನಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಇನ್ನು 2021ನೇ ಜನವರಿಯಲ್ಲಿ ದೇಶದಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿದ್ದು, ಎರಡು ವರ್ಷದ ಹಿಂದೆ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿತ್ತು. ಕಳೆದ ಏಪ್ರಿಲ್ನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರು ಬೂಸ್ಟರ್ ಡೋಸ್ ಪಡೆಯಲು ಸರ್ಕಾರ ಅನುಮತಿ ನೀಡಿದೆ.