ಚಂಡೀಗಢ, ಮೇ 24 (DaijiworldNews/MS): ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಪುಟದಿಂದ ವಜಾಗೊಳಿಸಿ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ.
ಪ್ರತಿ ಟೆಂಡರ್ ಪಡೆಯುವಾಗಲೂ ಶೇ.1 ರಷ್ಟು ಕಮಿಷನ್ ಸಚಿವರಿಗೆ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪ ಕೇಳಿಬಂದದ್ದರಿಂದ ಸಿಎಂ ವಜಾಗೊಳಿಸಿದ್ದರು. ಇನ್ನು ಪಂಜಾಬ್ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಸಚಿವರನ್ನು ವಶಕ್ಕೆ ಪಡೆದಿದ್ದಾರೆ. 10 ದಿನಗಳ ಹಿಂದೆ ಮುಖ್ಯಮಂತ್ರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ದೇಶದಲ್ಲೇ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡ 2ನೇ ಪ್ರಕರಣ ಇದಾಗಿದೆ. 2015ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಹ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವನೊಬ್ಬನನ್ನು ವಜಾಗೊಳಿಸಿದ್ದರು.
"ಎಎಪಿ ಪ್ರಾಮಾಣಿಕ ಪಕ್ಷ. ನಮ್ಮ ಸರ್ಕಾರವು 1 ರೂಪಾಯಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.ಇತ್ತೀಚೆಗೆ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ನನ್ನ ಗಮನಕ್ಕೆ ಬಂದಿತ್ತು. ಈ ವಿಚಾರ ಮಾಧ್ಯಮದವರಿಗೆ ಗೊತ್ತೇ ಇರಲಿಲ್ಲ...ನಾವು ಈ ವಿಚಾರವನ್ನು ತಣ್ಣಗಾಗಿಸಬಹುದಿತ್ತು. . ಹಾಗೆ ಮಾಡಿದ್ದರೆ ನಮ್ಮನ್ನು ನಂಬಿ ಲಕ್ಷಾಂತರ ಮಂದಿಗೆ ದ್ರೋಹ ಬಗೆಯುತ್ತಿದ್ದೆ. ಹಾಗಾಗಿ ಸಚಿವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇನೆ", ಎಂದು ಮಾನ್ ಹೇಳಿದ್ದರು.
ಸಿಎಂಗೆ ದೂರು ಬಂದ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ತಂಡ ರಚಿಸಿ ಸಚಿವರ ಭ್ರಷ್ಟಾಚಾರ ಮಾಡುತ್ತಿರುವುದಕ್ಕೆ ಖಚಿತ ಸಾಕ್ಷ್ಯ ಪಡೆಯಲಾಗಿತ್ತು. ಇದೀಗ ಅವರ ವಿರುದ್ಧ ಭ್ರಷ್ಟಾಚಾರ ನಡೆಸಿರುವುದು ನಿಖರ ಮಾಹಿತಿ ತಿಳಿದಿದ್ದರಿಂದ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ.