ರಂಗಾರೆಡ್ಡಿ (ತೆಲಂಗಾಣ), ಮೇ 24 (DaijiworldNews/DB): ತಂದೆಯ ಕುಡಿತದ ಚಟದಿಂದ ಬೇಸತ್ತು ಬಾಲಕಿಯೋರ್ವಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ವಲಯದ ಬುಗ್ಗೊನಿಗುಡ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಎಸೆಸ್ಸೆಲ್ಸಿ ವಿದ್ಯಾರ್ಥಿನಿ ಮನಿಷಾ ಎಂದು ಗುರುತಿಸಲಾಗಿದೆ. ತಾಯಿ ತೀರಿಕೊಂಡ ಬಳಿಕ ಅಪ್ಪ ಕುಡಿತಕ್ಕೆ ದಾಸನಾಗಿ ನಿತ್ಯವೂ ಕಿರುಕುಳ ನೀಡುತ್ತಿದ್ದಾನೆ. ತಂದೆಯನ್ನು ನಾನು ಕೊಲ್ಲಬೇಕೆಂಬಷ್ಟು ದ್ವೇಷ ಆತನ ಮೇಲಿದೆ. ಆದರೆ ಅದು ಅಸಾಧ್ಯವಾದ ಕಾರಣ ನಾನೇ ಸಾಯುತ್ತೇನೆ. ನನ್ನ ತಂದೆ ಪ್ರತಿದಿನ ಮದ್ಯ ಸೇವಿಸಿ ನೀಡುವ ಕಿರುಕುಳದಿಂದ ಬೇಸತ್ತಿದ್ದೇನೆ. ತಾಯಿ ಇದ್ದಾಗ ಆತ ಒಳ್ಳೆಯವನಾಗಿದ್ದ. ಆದರೆ ಅವರ ಅಗಲಿಕೆ ನಂತರ ಕುಡಿತದ ದಾಸನಾಗಿದ್ದಾನೆ. ಅವನನ್ನು ಅಪ್ಪ ಎನ್ನಲೂ ಹೇಸಿಗೆಯಾಗುತ್ತಿದೆ. ಅವನೊಬ್ಬ ಮೂರ್ಖ ಎಂದು ಡೆತ್ನೋಟ್ನಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ.
ಈ ಹಿಂದೆ ಮೂರು ಬಾರಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರೂ ಬದುಕಿ ಉಳಿದಿದ್ದೇನೆ. ಆದರೆ ಇನ್ನು ಸ್ವಲ್ಪ ಹೊತ್ತಿನಲ್ಲೇ ನಾನು ಸಾಯುತ್ತೇನೆ. ನನ್ನ ಸಾವಿಗಾಗಿ ಕಾಯುತ್ತಿದ್ದೇನೆ ಎಂದು ಮನಿಷಾ ಡೆತ್ನೋಟ್ನಲ್ಲಿ ಬರೆದಿದ್ದಾಳೆ.
ಆಕೆಯ ತಂದೆ ನರಸಿಂಹುಲು ಕುಡಿದು ಬಂದು ನಿತ್ಯ ಮನೆಯಲ್ಲಿ ಮಕ್ಕಳೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821