ಕೊಲ್ಲಂ, ಮೇ 24 (DaijiworldNews/HR): ಪತಿಯ ವರದಕ್ಷಿಣೆ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಸ್ಮಯ ನಾಯರ್ ಪ್ರಕರಣದಲ್ಲಿ ಆಕೆ ಪತಿ ಕಿರಣ್ ಕುಮಾರ್ ಅವರನ್ನು ದೋಷಿ ಎಂದು ತೀರ್ಪು ನೀಡಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.5 ಲಕ್ಷ ದಂಡವನ್ನು ವಿಧಿಸಿ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಕೆ.ಎನ್. ಸುಜೀತ್ ಆದೇಶ ಹೊರಡಿಸಿದ್ದಾರೆ.
ಕಿರಣ್ ವಿರುದ್ದ ಐಪಿಸಿ 304-ಹತ್ತು ವರ್ಷ, 306-ಆರು ವರ್ಷ, 498-ಎರಡು ವರ್ಷ ಅಡಿಯಲ್ಲಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, 12.5 ಲಕ್ಷ ದಂಡ ಪಾವತಿಸಬೇಕಿದೆ. ಇದರಲ್ಲಿ ಎರಡು ಲಕ್ಷ ರೂ. ಅನ್ನು ವಿಸ್ಮಯ ಪೋಷಕರಿಗೆ ನೀಡಬೇಕು ಎಂದು ಕೋರ್ಟ್ ಹೇಳಿದೆ.
ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸಿದ ವಿಸ್ಮಯ ತಂದೆ ತ್ರಿವಿಕ್ರಮ್ ನಾಯರ್, ಶಿಕ್ಷೆ ವಿಧಿಸಿರುವುದು ಸಮಾಧಾನ ತಂದಿದೆ. ಪೊಲೀಸರು ಹಾಗೂ ಪ್ರಾಸಿಕ್ಯೂಷನ್ ಮತ್ತು ಮಾಧ್ಯಮದವರಿಗೆ ಧನ್ಯವಾದಗಳು. ಜೀವಾವಧಿ ಶಿಕ್ಷೆಯ ನಿರೀಕ್ಷೆಯಲ್ಲಿದ್ದು ತೀರ್ಪಿನಿಂದ ನಿರಾಸೆಯಾಗಿದೆ ಎಂದು ಆಕೆಯ ತಾಯಿ ಸರಿತಾ ಹೇಳಿದ್ದಾರೆ.
ಇನ್ನು 42 ಸಾಕ್ಷಿಗಳು, 102 ದಾಖಲೆಗಳು ಮತ್ತು ಹಲವಾರು ಕರೆ ದಾಖಲೆಗಳನ್ನು ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಪರಿಶೀಲಿಸಲಾಗಿತ್ತು.
ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ವಿಸ್ಮಯಾ, 22, ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದಲ್ಲಿ ತನ್ನ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.