ಬೆಂಗಳೂರು, ಮೇ 24 (DaijiworldNews/HR): ವ್ಯಕ್ತಿಯೊಬ್ಬನನ್ನು ಕೊಲೆಗೈದ ಪ್ರಕರಣದಲ್ಲಿ ಜಾಮೀನು ಪಡೆದು ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಐದು ವರ್ಷಗಳ ನಂತರ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಾಂದರ್ಭಿಕ ಚಿತ್ರ
ಬಂಧಿತನನ್ನು ಮೈಸೂರಿನ ಹೆಬ್ಟಾಳ ನಿವಾಸಿ ಮಧುಸೂದನ್ ಅಲಿಯಾಸ್ ಮಧು(27) ಎಂದು ಗುರುತಿಸಲಾಗಿದೆ.
ವ್ಯಕ್ತಿಯೊಬ್ಬರನ್ನು 2014ರಲ್ಲಿ ಕೊಲೆ ಮಾಡಿ ನಗದು, ಚಿನ್ನ ಹಾಗೂ ವಜ್ರದ ಆಭರಣ ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ಮಧು ಎರಡನೇ ಆರೋಪಿಯಾಗಿದ್ದ. 2017ರಲ್ಲಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ, ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ.
ಹೈಕೋರ್ಟ್ನಿಂದ ಜಾಮೀನು ಪಡೆದುಕೊಂಡ ಆರೋಪಿ ಬಳಿಕ ಬಿಹಾರದ ಪಾಟ್ನಾಗೆ ಹೋಗಿ ರಾಹುಲ್ ಎಂಬ ಹೆಸರಿನಲ್ಲಿ ಜೀವನ ನಡೆಸುತ್ತಿದ್ದ. ಬಳಿಕ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಜತೆಗೆ ಕುಟುಂಬ ಸದಸ್ಯರನ್ನು ಸಂಪರ್ಕಿಸುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಆರೋಪಿ ಸಿಕ್ಕಿರಲಿಲ್ಲ. ಈ ಮಧ್ಯೆ ಆರೋಪಿ ಇತ್ತೀಚೆಗೆ ಬೆಂಗಳೂರಿಗೆ ಬಂದು ಸ್ನೇಹಿತನ ಜತೆ ಮಾಲ್ವೊಂದರಲ್ಲಿ ಕಾಣಿಸಿಕೊಂಡಿದ್ದು, ಸ್ನೇಹಿತನ ಜತೆ ಸೆಲ್ಫಿ ತೆಗೆದುಕೊಂಡು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದ.
ಇನ್ನು ಈ ಕುರಿತು ಮಾಹಿತಿ ಪಡೆದ ಆಡುಗೋಡಿ ಪೊಲೀಸರು ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಮಾಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಮೊದಲಿಗೆ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಮಧುನನ್ನು ಬಂಧಿಸಿದ್ದಾರೆ.