ಬೆಂಗಳೂರು, ಮೇ 24 (DaijiworldNews/DB): ಪಠ್ಯಪುಸ್ತಕ ವಿಚಾರವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಸುಳ್ಳು ಮಾಹಿತಿ ನೀಡಿ ಕೋಮು ದ್ವೇಷ ಹಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯಗಳನ್ನು ತಿರುಚಿ ಹಿಂದೆಲ್ಲ ಪುಸ್ತಕಗಳನ್ನು ತಯಾರು ಮಾಡಲಾಗಿತ್ತು. ಆದರೆ ಪ್ರಸ್ತುತ ನಿಜ ಸಂಗತಿಗಳನ್ನು ತಿಳಿಸುವ ಕೆಲಸ ನಡೆಯುತ್ತಿದೆ. ಇದನ್ನು ಅರಗಿಸಿಕೊಳ್ಳಲು ಸ್ವಯಂ ಘೋಷಿತ ಬುದ್ದಿಜೀವಿಗಳು, ಶಿಕ್ಷಣ ತಜ್ಞರು ಮತ್ತು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗದಿರುವ ಕಾರಣ ಸುಳ್ಳುಗಳನ್ನು ಬಿತ್ತರಿಸುವ ಕೆಲಸ ನಡೆಯುತ್ತಿದೆ ಎಂದವರು ಆಪಾದಿಸಿದರು.
ಟಿಪ್ಪು ಪಾಠಕೈ ಬಿಡಲಾಗಿದೆ ಎಂಬ ವದಂತಿಗಳನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವರದಿ ಬರುವ ಮುನ್ನವೇ ಹಬ್ಬಿಸಲು ಆರಂಭಿಸಿದರು. ಪುಸ್ತಕ ಮುದ್ರಣಕ್ಕೆ ಹೋಗುವ ವೇಳೆ ಭಗತ್ ಸಿಂಗ್ ಬಗ್ಗೆ ಪಾಠ ತೆಗೆದು ಹಾಕಲಾಗಿದೆ ಎಂದು ಆಪಾದನೆ ಮಾಡಿದರು. ಇದೀಗ ಬಸವಣ್ಣ, ನಾರಾಯಣಗುರು, ಕುವೆಂಪು ವಿಚಾರದಲ್ಲಿಯೂ ಇದೇ ರೀತಿಯ ಮಿಥ್ಯಾರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕೆಲವು ಅಧ್ಯಾಯಗಳನ್ನು ಕೈ ಬಿಟ್ಟಾಗ ಇವರೆಲ್ಲ ಎಲ್ಲಿ ಹೋಗಿದ್ದರು ಎಂದು ಅವರು ಪ್ರಶ್ನಿಸಿದರು.
ನಾರಾಯಣ ಗುರುಗಳ ಕುರಿತ ಅಧ್ಯಾಯ ಕೈಬಿಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, 10ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂಬುದಾಗಿ ಸಿದ್ದರಾಮಯ್ಯನವರ ಆಡಳಿತಾವಧಿಯಿಂದಲೂ ಶಿಕ್ಷಕರಿಂದ ದೂರುಗಳು ಬರುತ್ತಿದ್ದವು. ಅದಕ್ಕಾಗಿ ನಾರಾಯಣ ಗುರುಗಳ ಅಧ್ಯಾಯವನ್ನು ಇತಿಹಾಸದ ಪಠ್ಯದಿಂದ ತೆಗೆಯಲಾಗಿದೆ. ಆದರೆ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿ ಆ ಪಠ್ಯವನ್ನು ಉಳಿಸಿಕೊಳ್ಳಲಾಗಿದೆ. ಸತ್ಯ ತಿಳಿಯದೆ ಮಾತನಾಡುವುದು ತಪ್ಪು ಎಂದರು.
ಚಂದ್ರಶೇಖರ್ ಆಜಾದ್, ಸುಖದೇವ್ ಮತ್ತು ರಾಜಗುರು ಅವರಂತಹ ಇತರ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆಯೇ ಹೊರತು ಕೈ ಬಿಡಲಾಗಿಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.