ಬೆಂಗಳೂರು, ಮೇ 24 (DaijiworldNews/MS): ಕರ್ನಾಟಕದ ವಿಧಾನ ಸಭೆಯಿಂದ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಅಂತಿಮವಾಗಿ ಟಿ.ಎ.ಶರವಣ ಆಯ್ಕೆಯಾಗಿದ್ದಾರೆ. ನಟ ದೊಡ್ಡಣ್ಣ ಅಳಿಯ ವೀರೇಂದ್ರ ಹಾಗೂ ಶರವಣ ನಡುವೆ ಟಿಕೆಟ್ಗಾಗಿ ಪ್ರಬಲ ಪೈಪೋಟಿ ನಡೆದಿತ್ತು.
ಅಭ್ಯರ್ಥಿಯಾಗಿ ಟಿ.ಎ.ಶರವಣ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಂಗಳವಾರ ಘೋಷಿಸಿದ್ದಾರೆ. ಈಗಾಗಲೇ ಶರವಣ ಅವರು ಒಂದು ಬಾರಿ ಪರಿಷತ್ಗೆ ಆಯ್ಕೆಯಾಗಿದ್ದರಿಂದ ಈ ಬಾರಿ ದೊಡ್ಡಣ್ಣ ಅಳಿಯ ವೀರೇಂದ್ರ ಅವರಿಗೆ ಜೆಡಿಎಸ್ ಪರಿಷತ್ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗಿತ್ತು ಆದರೆ ಕೊನೆಗೆ ಶರವಣ ಅವರನ್ನೇ ಆಯ್ಕೆ ಮಾಡಿದೆ. ಇದರೊಂದಿಗೆ, ಶರವಣ ಅವರು ಎರಡನೇ ಬಾರಿಗೆ ಪರಿಷತ್ ಪ್ರವೇಶಿಸಲಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಶರವಣ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಇದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ.