ಬೆಂಗಳೂರು, ಮೇ 24 (DaijiworldNews/DB): ವಿಧಾನ ಪರಿಷತ್ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್ ಅವರ ಹೆಸರನ್ನು ಅಂತಿಮಗೊಳಿಸಿರುವುದು ಕಾಂಗ್ರೆಸ್ನ ಹಿರಿಯ ಮುಖಂಡರನ್ನು ಕೆರಳಿಸಿದೆ.
ವಿಧಾನಸಭೆಯ ಸದಸ್ಯಬಲದ ಆಧಾರದಲ್ಲಿಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿರುವ ಕಾಂಗ್ರೆಸ್ ಇಬ್ಬರ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ. ಆದರೆ ಸೀಟಿಗಾಗಿ ಮಾಜಿ ಸಚಿವರು, ಹಿರಿಯ ನಾಯಕರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಾಗಿದ್ದು, ಎಲ್ಲರ ಹೆಸರನ್ನೂ ಹೈಕಮಾಂಡ್ಗೆ ಶಿಫಾರಸ್ಸು ಮಾಡಲಾಗಿತ್ತು. ಈ ಪೈಕಿ ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್ ಅವರ ಹೆಸರು ಅಂತಿಮಗೊಂಡಿದೆ. ಇದರಿಂದ ಪಕ್ಷದಲ್ಲಿ ಅಸಮಾಧಾನ ಹೆಚ್ಚಲು ಕಾರಣವಾಗಿದೆ. ಮಹಿಳೆಯರಿಗಾದರೂ ಸೀಟು ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೂವರು ಮಹಿಳಾ ಸದಸ್ಯರು ಈ ಹಿಂದೆ ಇದ್ದರು. ಆದರೆ ಸದ್ಯ ಓರ್ವರು ಮಾತ್ರ ಮಹಿಳಾ ಸದಸ್ಯೆಇದ್ದು, ಈ ಬಾರಿ ಅವರು ಪರಿಷತ್ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ. ಕನಿಷ್ಠ ಪಕ್ಷ ಅವರನ್ನು ಮರು ಆಯ್ಕೆ ಮಾಡಬಹುದಿತ್ತು. ಅಥವಾ ಬೇರೆಯಾರಿಗಾದರೂ ಮಹಿಳೆಯರಿಗೆ ಅವಕಾಶ ನೀಡಬಹುದಿತ್ತು. ಆದರೆ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯಕ್ಕೆ ಮತ್ತೆ ಮಣೆ ಹಾಕಲಾಗಿದೆ ಎಂಬುದು ಪಕ್ಷದ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ನೂರಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿದ್ದರು. ಸೋಮವಾರ ಡಿಕೆಶಿ ಮತ್ತು ಸಿದ್ದರಾಮಯ್ಯವರನ್ನು ದೆಹಲಿಗೆ ಕರೆಸಿರುವ ಹೈಕಮಾಂಡ್, ಇಬ್ಬರು ನಾಯಕರೊಂದಿಗೆ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಬಿ.ಎಲ್.ಶಂಕರ್, ಸುದರ್ಶನ್, ವಿ.ಎಸ್.ಉಗ್ರಪ್ಪ, ಆರ್.ಬಿ.ತಿಮ್ಮಾಪುರ, ಐವನ್ ಡಿಸೋಜ, ಪುಷ್ಪಾ ಅಮರನಾಥ್, ಮನ್ಸೂರ್, ಮನೋಹರ್, ಎಂ.ಆರ್. ಸೀತಾರಾಮ್, ಅಬ್ದುಲ್ ಜಬ್ಬಾರ್, ನಿವೇದಿತ್ ಆಳ್ವ, ಎಸ್.ಆರ್. ಪಾಟೀಲ್ ಹೆಸರು ಅಂತಿಮ ಹಂತದಲ್ಲಿ ಚರ್ಚೆಗೆ ಬಂದಿತ್ತು. ಬಳಿಕ ಅಂತಿಮವಾಗಿ ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್ ಅವರ ಹೆಸರನ್ನುಆಯ್ಕೆ ಮಾಡಲಾಯಿತು ಎಂದು ವರದಿಗಳು ತಿಳಿಸಿವೆ.