ಮೈಸೂರು, ಮೇ 24 (DaijiworldNews/HR): ರಾಯಚೂರು ಬಸ್ ನಿಲ್ದಾಣದಲ್ಲಿ ರಘು ಎಂಬ ಮೈಸೂರಿನ ಯುವಕನ ಕೈಗೆ ಮಹಿಳೆಯೊಬ್ಬರು ಮಗುವನ್ನು ಕೊಟ್ಟು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮೈಸೂರಿನ ರಘು ಎಂಬ ಯುವಕ ಕೆಲಸದ ನಿಮಿತ್ತ ರಾಯಚೂರಿಗೆ ಹೋಗಿದ್ದು,ವಾಪಸ್ ಊರಿಗೆ ಹಿಂದಿರುಗುತ್ತಿದ್ದಾಗ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ತನ್ನ ಕೈಗೆ ಮಗು ಕೊಟ್ಟು ಈಗ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ. 3-4 ಗಂಟೆ ಕಾದರೂ ಮಹಿಳೆ ಸುಳಿವಿಲ್ಲ ಎಂದು ಹೇಳಿ ಮಗುವನ್ನು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ಯುವಕ ಒಪ್ಪಿಸಿದ್ದು, ಮಹಿಳೆ ಪತ್ತೆಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ಪ್ರೇಮಿಗಳಿಬ್ಬರ ಕಳ್ಳಾಟ ಬಯಲಾಗಿದೆ.
ಇನ್ನು ಮಹಿಳೆಯೊಂದಿಗಿನ ಪ್ರೀತಿಗೆ ಮಗು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ 9 ತಿಂಗಳ ಮಗುವನ್ನು ದೂರವಿಡಲು ರಘು ಹಾಗೂ ಮಹಿಳೆ ಇಬ್ಬರೂ ಇಂಥಹ ಪ್ಲಾನ್ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಮಹಿಳೆ ಪತಿಯಿಂದ ದೂರವಾಗಿ ಬಳಿಕ ಯುವಕ ರಘುಗೆ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದಳು. ಒಂದೂವರೆ ವರ್ಷದಿಂದ ಇಬ್ಬರ ನಡುವೆ ಸ್ನೇಹ, ಪ್ರೀತಿ ಆರಂಭವಾಗಿದೆ. ಮಗುವನ್ನು ದೂರಮಾಡಿ ಇಬ್ಬರೂ ಮದುವೆಯಾಗಲು ಇಂಥಹ ನಾಟಕವಾಡಿದ್ದರು ಎನ್ನಲಾಗಿದೆ.