ನಾಗ್ಪುರ, ಮೇ 24 (DaijiworldNews/MS): ಮನೆಗೆ ಬೇಕಾದ ನೀರು ತುಂಬಿಸಲಿಲ್ಲ ಎಂಬ ಕಾರಣಕ್ಕೆ ಮದ್ಯವ್ಯಸನಿ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ಹತ್ಯೆ ನಡೆಸಿರುವ ಘಟನೆ ನಾಗ್ಪುರದ ಸುರದೇವಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನ್ನು ಗುಲ್ಶನ್ ಅಲಿಯಾಸ್ ಗಬ್ರು (10) ಹಾಗೂ ಆರೋಪಿಯನ್ನು ಸಂತಲಾಲ್ ಮಾದವಿ ಎಂದು ಗುರುತಿಸಲಾಗಿದೆ.
ಆರೋಪಿಯು ಮದ್ಯವ್ಯಸನಿಯಾಗಿದ್ದು, ಯಾವಾಗಲೂ ಕ್ಷುಲ್ಲಕ ವಿಷಯಕ್ಕೆ ಮಗನಿಗೆ ಹೊಡೆಯುತ್ತಿದ್ದನು. ಭಾನುವಾರ ಕುಡಿದು ಮನೆಗೆ ಬಂದಿದ್ದ ಸಂತಲಾಲ್ ಮನೆಗೆ ನೀರು ತರಲು ನಿರಾಕರಿಸಿದ ಕಾರಣಕ್ಕೆ ಮಗನನ್ನು ಅಮಾನುಷವಾಗಿ ಥಳಿಸಿದ್ದಾನೆ. ಬಾಲಕ ನಿಶ್ಚಲವಾಗಿ ಬಿದ್ದಿದ್ದನ್ನು ಗಮನಿಸಿದ ಸಂಬಂಧಿಕ ಮಹಿಳೆಯೊಬ್ಬರು ನೆರೆಹೊರೆಯವರಿಗೆ ತಿಳಿಸಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ವೇಳೆ ಬಾಲಕನನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ಬೆಲ್ಟ್ನಿಂದ ಬಾಲಕನ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ವರದಿ ಬಂದಿದೆ. ಇನ್ನೂ ವಿಚಾರಣೆಯ ವೇಳೆ ಸಂತಲಾಲ್ ತಪ್ಪೊಪ್ಪಿಕೊಂಡಿದ್ದು, ಆತನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.