ಬೆಂಗಳೂರು, ಮೇ 24 (DaijiworldNews/HR): ಅಪಘಾತ ಸಂಭವಿಸಿದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿಯ ಈ ಜಾಗದಲ್ಲಿ ಪದೇಪದೆ ದುರಂತಗಳು ಸಂಭವಿಸುತ್ತಿವೆ, ಅದು 'ಸಾವಿನ ಹೆದ್ದಾರಿ' ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಮತ್ತೆಅಪಘಾತಗಳು ಸಂಭವಿಸದಂತೆ ತಡೆಯಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಲಾರಿ ಹಾಗೂ ಬಸ್ ನಡುವೆ ನಡೆದ ಅಪಘಾತದ ಕುರಿತು ಟ್ವೀಟ್ ಮಾಡಿರುವ ಅವರು, ಹುಬ್ಬಳ್ಳಿ ಹೊರ ವಲಯದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಳೆದ ತಡರಾತ್ರಿ ಸಂಭವಿಸಿರುವ ಈ ದುರಂತದಲ್ಲಿ 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದರು.
ಇನ್ನು ದುರಂತದಲ್ಲಿ ಅಸುನೀಗಿದ ನತದೃಷ್ಟರೆಲ್ಲರಿಗೂ ಚಿರಶಾಂತಿ ಸಿಗಲಿ ಹಾಗೂ ಆವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ, ಗಾಯಾಳುಗಳೆಲ್ಲ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ ಎಂದು ಹೇಳಿದ್ದಾರೆ.