ಬೆಂಗಳೂರು, ಮೇ 23 (DaijiworldNews/SM): ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಹಲವು ದಿನಗಳಿಂದ ಕಾಂಗ್ರೆಸ್ನ ಹಿರಿಯ ನಾಯಕರು ಟಿಕೆಟ್ಗಾಗಿ ಹೈಕಮಾಂಡ್ ಕದತಟ್ಟಿದ್ದರು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಹೈಕಮಾಂಡ್ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಜಾತಿ ಸಮೀಕರಣದಲ್ಲಿ ಯಾದವ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ನಾಗರಾಜ್ ಯಾದವ್ಗೆ ಅವಕಾಶ ನೀಡಿದೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಮೇಶ್ ಜಾರಕಿಹೊಳಿ ಬೆಂಬಲಿಗ ಸಹಾ ಆಗಿರುವ ನಾಗರಾಜ್ ಯಾದವ್ಗೆ ಅವಕಾಶ ಸಿಕ್ಕಿದೆ. ಅಲ್ಲದೇ ಯಾದವ್ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ.
ಈ ಹಿಂದೆ ಒಂದು ಬಾರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಪರಿಷತ್ಗೆ ನಾಮನಿರ್ದೇಶನಗೊಂಡಿದ್ದ ಅಬ್ದುಲ್ ಜಬ್ಬಾರ್ಗೆ ಹೈಕಮಾಂಡ್ ಮಣೆ ಹಾಕಿದೆ. ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜಾಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.