ಬೆಂಗಳೂರು, ಮೇ 23 (DaijiworldNews/MS): ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥರನ್ನು ವಜಾ ಮಾಡುವಂತೆ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಹರಿಹಾಯ್ದಿದ್ದಾರೆ.
ಇಂದು ಬೆಳಗ್ಗೆ ಸಿದ್ದಾರಮಯ್ಯ ಟ್ವೀಟ್ ಮಾಡಿದ್ದು, ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಆತನನ್ನು ಕಿತ್ತುಹಾಕಬೇಕು ಎಂದಿದ್ದಾರೆ. ಜೊತೆಗೆ ರೋಹಿತ್ ಚಕ್ರತೀರ್ಥ ಅವರು ನಾಡಗೀತೆಯನ್ನು ತಿರುಚಿ ಬರೆದಿದ್ದಾರೆ ಎನ್ನಲಾದ ಟ್ವೀಟರ್ ಫೋಸ್ಟ್ ಅನ್ನು ತಮ್ಮ ಆಗ್ರಹದೊಂದಿಗೆ ಲಗತ್ತಿಸಿದ್ದಾರೆ.
ಇನ್ನು ಪ್ರಿಯಾಂಕ ಖರ್ಗೆ ಕೂಡಾ ಟ್ವೀಟ್ ಮಾಡಿ, ಶಿಕ್ಷಣ ತಜ್ಞರು, ವಿದ್ವಾಂಸರು ಇರಬೇಕಾದ ಪಠ್ಯ ಪುಸ್ತಕ ಸಮಿತಿಗೆ ₹2 ಟ್ರಾಲ್ಗಳು, ಬಿಜೆಪಿಯ ಬಾಡಿಗೆ ಭಾಷಣಕಾರರನ್ನು ಕೂರಿಸಿ ಮಕ್ಕಳಿಗೆ ಸುಳ್ಳಿನ ಶೂರರ ಪಾಠ ಹೇಳಿಸುವುದು ವಿಪರ್ಯಾಸ.ನಾಡು, ನುಡಿಗೆ, ಕುವೆಂಪುರಂತಹವರಿಗೆ ಅವಮಾನಿಸಿದ ಈತನ ಟ್ರಾಲ್ ಪಾಂಡಿತ್ಯವೇ ಅರ್ಹತೆಯೇ? ಕೂಡಲೇ ಈತನನ್ನು ಕಿತ್ತೆಸೆದು ಮಕ್ಕಳ ಭವಿಷ್ಯ ಕಾಪಾಡಬೇಕು ಸರ್ಕಾರ ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಕಳೆದ ವರ್ಷವೇ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚನೆ ಮಾಡಿ, ಆ ಸಮಿತಿ ವರದಿ ನೀಡಿಯೂ ಆಗಿದೆ. ವರದಿ ಆದರಿಸಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಿಯೂ ಆಗಿದೆ. ಎಲ್ಲ ಮುಗಿದ ಮೇಲೆ ರೋಹಿತ್ರನ್ನು ಸಮಿತಿಯಿಂದ ವಜಾಗೊಳಿಸಿ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.