ಬೆಂಗಳೂರು, ಮೇ 23 (DaijiworldNews/MS): ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲಿಸದೆ ಕಾನೂನು ಉಲ್ಲಂಘನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೇ.24ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಮೇ 24ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 9 ರಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಾದಯಾತ್ರೆ ಆರಂಭಿಸಿದ್ದರು. ಮೇಕೆದಾಟು ಪಾದಾಯಾತ್ರೆಯ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಲಿಲ್ಲ , ಸೋಂಕು ತಡೆಗಟ್ಟುವಲ್ಲಿ ರಾಜಕಾರಣಿಗಳು ಜವಾಬ್ದಾರಿ ಮೆರೆದಿಲ್ಲ ಎಂದು ಆರೋಪ ಕೇಳಿಬಂದಿತ್ತು. ಕೊನೆಗೆ ಹೈಕೋರ್ಟ್ ನಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬಳಿಕ ಪಾದಯಾತ್ರೆ ಗೆ ತಡೆ ಬಿದ್ದಿತ್ತು. ಇಪ್ಪತ್ತಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿತ್ತು. ಹೈಕೋರ್ಟ್ ನಿರ್ದೇಶನ ಆಧರಿಸಿ ಜ.13ಕ್ಕೆ ರಾಮನಗರದಲ್ಲಿ ಪಾದಯಾತ್ರೆ ಅಂತ್ಯಗೊಳಿಸಲಾಗಿತ್ತು. ಫೆ.27ಕ್ಕೆ ರಾಮನಗರದಿಂದ ಮತ್ತೆ ಪಾದಯಾತ್ರೆ ಆರಂಭವಾಗಿತ್ತು. 5 ದಿನಗಳ ಯಾತ್ರೆ ಬಳಿಕ ಬೆಂಗಳೂರಿನಲ್ಲಿ ಮಾರ್ಚ್ 3ರಂದು ಸಮಾರೋಪಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಜನ ಪ್ರತಿ ನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಈ ಪ್ರಕರಣ ಸಂಬಂಧದ ವಿಚಾರಣೆಯನ್ನು ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು, ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ 29 ಮಂದಿಗೆ ಸಮನ್ಸ್ ಜಾರಿ ಮಾಡಿದೆ.