ಬೆಂಗಳೂರು, ಮೇ 23 (DaijiworldNews/MS): 'ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು, ಅವರನ್ನು "ಅಹಿಂದದ ಸೂತ್ರ ಪಠಿಸುವ ಅಹಿಂದು ಲಾಯರಿ " ಎಂದು ಕರೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಘಟಕ,"ಅಹಿಂದದ ಸೂತ್ರ ಪಠಿಸುವ ಅಹಿಂದು ಲಾಯರಿ ಸಿದ್ದರಾಮಯ್ಯನವರು ಗೋಮಾಂಸ ಭಕ್ಷಣೆಯ ಪರವಾಗಿ ವಾದಮಂಡನೆ ಮಾಡಿ ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಪುಂಗುವ ಇವರು ಒಂದು ವಿಶೇಷ ಸಮುದಾಯವನ್ನು ಅಸಾಂವಿಧಾನಿಕ ರೀತಿಯಲ್ಲಿ ಓಲೈಸಿಕೊಂಡು ಬರುತ್ತಿರುವ ಕಾರಣವೇನು ಎಂದು ಸ್ಪಷ್ಟ ಪಡಿಸಲೇಬೇಕು್ ಎಂದು ಒತ್ತಾಯಿಸಿದೆ.
ಹಿಂದುಳಿದ & ದಲಿತ ವರ್ಗದ ಹಿಂದೂ ಸೋದರರೂ ಕೂಡ ಗೋವನ್ನು ಪೂಜಿಸುತ್ತಾರೆ. ಗೋಮಾಂಸ ತಿನ್ನಬೇಕು ಅನ್ನಿಸಿದರೆ ತಿನ್ನುವೆ ಎನ್ನುವ ನೀವು ಯಾವ ನೈತಿಕ ಮೌಲ್ಯದ ಮೇಲೆ ಕೋಟ್ಯಂತರ ಹಿಂದೂಗಳು ಆಸ್ಥೆಯಿಂದ ನಡೆದುಕೊಳ್ಳುವ ಮಠ ಮಂದಿರಗಳಿಗೆ ಹೋಗಿ ಬರುತ್ತೀರಿ? ಹೀಗೆ ಹಿಂದೂಗಳಿಗೆ ಅವಮಾನ ಮಾಡಿ ಕಡೆಗೆ ಅವರಲ್ಲಿಯೇ ಮತಭಿಕ್ಷೆ ಬೇಡುವುದು ನಾಚಿಕೆಗೇಡು ಎಂದು ತಿರುಗೇಟು ನೀಡಿದೆ.