ಬೆಂಗಳೂರು, ಮೇ 23 (DaijiworldNews/MS): ರಾಜ್ಯಸಭೆ, ವಿಧಾನಸಭೆ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದೆ. ಇದೇ ಹಿನ್ನಲೆಯಲ್ಲಿ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ರಾತ್ರಿ ಧಿಡೀರ್ ದೆಹಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಈ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಹುಟ್ಟುಹಾಕಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಭೇಟಿಗೆ ಸಮಯ ನೀಡುವಂತೆ ಸೋನಿಯಾ ಗಾಂಧಿ ಅವರಿಗೆ ಹಲವು ಮನವಿ ಮಾಡಿದ್ದರು ಚರ್ಚೆ ನಡೆಸುವಂತಹ ಸಮಯ ಸಿಕ್ಕಿರಲಿಲ್ಲ. ಇವರ ನಡುವಿನ ಭೇಟಿ ಫೋಟೊ ಮಟ್ಟಿಗಷ್ಟೆ ಇರುತ್ತಿತ್ತು.
ಇನ್ನೊಂದೆಡೆ ಅಹಿಂದ ಗುಂಪು, ವಲಸಿಗರ ಮೇಲಾಟ ಸೇರಿದಂತೆ ಹಲವು ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ ನಲ್ಲಿ ತಲ್ಲಣ ಹುಟ್ಟುಹಾಕಿದೆ. ಪಕ್ಷದ ನಿಷ್ಠಾವಂತ ನಾಯಕರು ಕ್ಷುಲ್ಲಕ ಕಾರಣಕ್ಕಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಪಕ್ಷಕ್ಕೆ ಆಸ್ತಿಯಾಗಬಹುದಾದ ಬಹಳಷ್ಟು ನಾಯಕರನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಈ ನಡುವೆ ದಿಡೀರ್ ನಡೆದ ಬೆಳವಣಿಗೆಯಲ್ಲಿ ಹೈಕಮಾಂಡ್ ಕರೆ ಬಂದಿದ್ದು ತುಮಕೂರಿನಲ್ಲಿ ಕಾರ್ಯಕ್ರಮವನ್ನು ಆತುರಾತುರವಾಗಿ ಮುಗಿಸಿ ಡಿ.ಕೆ.ಶಿವಕುಮಾರ್ ರಾತ್ರಿ ದೆಹಲಿಗೆ ತೆರಳಿದ್ದಾರೆ. ಇಂದು ರಾಷ್ಟ್ರೀಯ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.