ಹುಬ್ಬಳ್ಳಿ, ಮೇ 22 (DaijiworldNews/DB): ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಚಿಂತನೆಗಳನ್ನು ಪಠ್ಯದಲ್ಲಿ ಸೇರಿಸಿದರೆ ತಪ್ಪೇನು ಇಲ್ಲ. ವಿದ್ಯಾರ್ಥಿಗಳ ಜ್ಞಾನ ವೃದ್ದಿಯಾಗಲು ಅವರ ಚಿಂತನೆಗಳು ಸಹಕಾರಿ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ಸೂಲಿಬೆಲೆ ಅವರ ಹಲವು ಲೇಖನ ಮತ್ತು ಪುಸ್ತಕಗಳನ್ನು ನಾನು ಓದಿದ್ದೇನೆ. ಅವರ ಭಾಷಣಗಳನ್ನೂ ಕೇಳಿದ್ದೇನೆ. ಹಿಂದೂ ಸಮಾಜದ ಉದ್ದಾರಕ್ಕೆಅವರ ಶ್ರಮ ಅಭಿನಂದನೀಯ. ಅವರಂತಹ ಚಿಂತಕ, ಉತ್ತಮ ವಾಗ್ಮಿಯನ್ನು ನಾನು ಇದುವರೆಗೆ ನೋಡಿಲ್ಲ. ಅವರ ವೈಚಾರಿಕ ಲೇಖನಗಳನ್ನು ಪಠ್ಯದಲ್ಲಿ ಸೇರಿಸಿದರೆ ವಿದ್ಯಾರ್ಥಿಗಳಿಗೆ ಜ್ಞಾನವರ್ಧನೆಯಾಗಲಿದೆ. ಅದರಿಂದೇನೂ ಸಮಸ್ಯೆ ಆಗದು ಎಂದರು.
ನರಭಕ್ಷಕ ಟಿಪ್ಪುವಿನ ದೌರ್ಜನ್ಯದ ಕಥೆಯನ್ನು ಚಿತ್ರದುರ್ಗ, ಕೊಡಗು ಭಾಗದೆಲ್ಲರೂ ಹೇಳುತ್ತಾರೆ. ಅಂತಹ ವ್ಯಕ್ತಿಯ ಕುರಿತು ಮಕ್ಕಳು ಓದುವುದು ಒಳ್ಳೆಯದಲ್ಲ. ಅದನ್ನು ಕೈ ಬಿಟ್ಟಿರುವುದರಿಂದ ಯಾವ ತಪ್ಪೂ ಆಗಿಲ್ಲ. ಭಗತ್ ಸಿಂಗ್ ಪಾಠ ಕೈ ಬಿಡಲಾಗಿದೆ ಎಂಬ ಊಹಾಪೋಹದ ಕುರಿತು ಈಗಾಗಲೇ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದ ಅವರು, ಪಠ್ಯ ಪುಸ್ತಕದ ಸಮಿತಿ ರಚನೆ ಕುರಿತು ಎಚ್. ವಿಶ್ವನಾಥ ಅವರ ಹೇಳಿಕೆ ವೈಯಕ್ತಿಕ. ಅದಕ್ಕೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ವರಿಷ್ಠರು ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ ಎಂದರು.
ಮುಂದಿನ ಎರಡು ದಿನಗಳೊಳಗಾಗಿ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಸ್ಥಾನಾಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಚಿವ ಸ್ಥಾನ ಬೇಡ ಎಂದು ಬಿಟ್ಟು ಕೊಟ್ಟಿದ್ದೇನೆ. ಇನ್ನು ಸಂಪುಟ ವಿಸ್ತರಣೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಹೇಗಾಗುತ್ತೇನೆ ಎಂದು ಪ್ರಶ್ನಿಸಿದರು.