ಮೈಸೂರು, ಮೇ 22 (DaijiworldNews/DB): ತಾಳಿ ಕಟ್ಟುವ ವೇಳೆಯಲ್ಲಿ ವಧು ಕುಸಿದು ಬಿದ್ದಂತೆ ನಾಟಕವಾಡಿ ತನಗೆ ಈ ಮದುವೆ ಇಷ್ಟವಿಲ್ಲ ಎಂದ ಕಾರಣ ಮದುವೆ ನಿಂತ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಸುಣ್ಣದಕೇರಿ ಸಿಂಚನಾ ಮದುವೆ ಎಚ್.ಡಿ.ಕೋಟೆ ತಾಲೂಕಿನ ಯುವಕನೊಂದಿಗೆ ಇಂದು ನಿಶ್ಚಯವಾಗಿತ್ತು. ಮದುವೆಗೆಂದು ಸಂಭ್ರಮದಿಂದಲೇ ಕಲ್ಯಾಣ ಮಂಟಪದಲ್ಲಿ ಜನ ಸೇರಿದ್ದರು. ಅದ್ದೂರಿಯಾಗಿ ಸಿದ್ದತೆಯನ್ನೂ ಮಾಡಲಾಗಿತ್ತು. ಆದರೆ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಕುಸಿದು ಬಿದ್ದಿದ್ದಾಳೆ. ಇದರಿಂದ ಆತಂಕಗೊಂಡ ಎರಡೂ ಕಡೆಯ ಮಂದಿ ವಧುವನ್ನು ಎಬ್ಬಿಸಿ ನೀರು ಕುಡಿಸಿ ಸಮಾಧಾನ ಪಡಿಸಿದ್ದಾರೆ. ಈ ವೇಳೆ ಆಕೆ ತನಗೆ ಈವರ ಇಷ್ಟವಿಲ್ಲ, ಮದುವೆಯೇ ಬೇಡ ಎಂದಿದ್ದಾಳೆ. ಇದರಿಂದ ಎರಡೂ ಕುಟುಂಬದವರು ಶಾಕ್ ಆಗಿದ್ದಾರೆ. ಕೊನೆಗೆ ಮದುವೆ ಮುರಿದು ಬಿದ್ದಿದೆ.
ಸಿಂಚನಾ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿರುವುದನ್ನು ಅರಿತ ಆಕೆಯ ಪ್ರೇಮಿ ಮದುವೆಯಾಗಲಿರುವ ಯುವಕನಿಗೆ ತಾನು ಆಕೆಯನ್ನು ಪ್ರೀತಿಸುತ್ತಿರುವುದಾಗಿ ಮೆಸೇಜ್ ಕಳುಹಿಸಿದ್ದ. ಈ ವಿಚಾರವನ್ನು ಸಿಂಚನಾಳಲ್ಲಿ ಕೇಳಿದಾಗ ಮೆಸೇಜ್ ಕಳುಹಿಸಿದಾತ ಯಾರೆಂದೇ ತನಗೆ ಗೊತ್ತಿಲ್ಲ, ಈ ಮದುವೆ ನನಗೆ ಇಷ್ಟವಿದೆ ಎಂದಿದ್ದಳು ಎನ್ನಲಾಗಿದೆ. ಆದರೆ ಈಗ ಮದುವೆ ಮಂಟಪದಲ್ಲಿ ಮದುವೆ ಇಷ್ಟವಿಲ್ಲ, ಪ್ರೀತಿಸಿದಾತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುವೆಯ ದಿನದವರೆಗೂ ಈ ವಿಚಾರ ತಿಳಿಸದೆ, ಮದುವೆ ದಿನದಂದು ತಾಳಿ ಕಟ್ಟುವ ವೇಳೆ ಆಕೆ ಮದುವೆ ಮುರಿದಿರುವುದರಿಂದ ನಮ್ಮ ಮರ್ಯಾದೆ ಹೋಗಿದೆ. ನಮಗೆ ಅವಮಾನವಾಗಿದೆ ಎಂದು ವರನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ.