ಮೈಸೂರು, ಮೇ 22 (DaijiworldNews/DB): ಎಚ್. ವಿಶ್ವನಾಥ್ ಅವರು ನನಗೆ ಮಾತ್ರವಲ್ಲ, ದೇಶ, ವಿಶ್ವಕ್ಕೇ ಪ್ರಶ್ನೆ ಕೇಳುತ್ತಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಮೈಸೂರು ಉಸ್ತುವಾರಿ ಆಗಿದ್ದಾಗ ಎಷ್ಟು ಸಭೆ ಮಾಡಿದ್ದಾರೆ, ಎಷ್ಟು ಸಲ ತಾಲೂಕು ಪ್ರವಾಸ ಕೈಗೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಇದುವರೆಗೂ ಯಾರೂ ಮಾಡದೇ ಇರುವಷ್ಟು ತಾಲೂಕು, ಹಳ್ಳಿಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಜನರ ಸಮಸ್ಯೆ ಆಲಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಇದನ್ನು ಮೊದಲು ಅವರು ತಿಳಿದುಕೊಳ್ಳಬೇಕು ಎಂದರು.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಯವರು ಭೇಟಿ ನೀಡುತ್ತಿದ್ದಾರೆ. ಸಭೆ ಮಾಡುವುದು, ಸ್ಥಳ ಪರಿಶೀಲನೆಗೆ ತೆರಳುವುದು ಚುನಾವಣಾ ನೀತಿ ಸಂಹಿತೆ ಪ್ರಕಾರ ನಿಷಿದ್ದವಾಗಿರುವುದರಿಂದ ನಾನು ಭೇಟಿಯಾಗುವುದು ಸಾಧ್ಯವಾಗಿಲ್ಲ. ಆದರೆ ಸಂಸದ, ಸಚಿವಾಗಿದ್ದ ವಿಶ್ವನಾಥ್ ಅವರಿಗೆ ಇದು ತಿಳಿಯದೇ ಹೋಗಿರುವುದು ದುರಂತ ಎಂದು ಅವರು ತಿಳಿಸಿದರು.