ಚೆನ್ನೈ, ಮೇ 22 (DaijiworldNews/DB): ಇಂಧನ ಬೆಲೆ ಏರಿಕೆ ಮಾಡುವಾಗ ನಮ್ಮನ್ನು ಕೇಳದ ಕೇಂದ್ರ ಸರ್ಕಾರ ಈಗ ಬೆಲೆ ಇಳಿಸಿ ಎಂದು ಕೇಳುವುದೇಕೆ ಎಂದು ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ದ ಕಿಡಿ ಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಹಣಕಾಸು ಮತ್ತು ಮಾನವ ಸಂಪನ್ಮೂಲ ಸಚಿವ ಡಾ. ಪಿ. ತಿಯಾಗ ರಾಜನ್, ಇಂಧನ ದರಗಳ ವ್ಯಾಟ್ ತಗ್ಗಿಸುವಂತೆ ಕೇಂದ್ರ ಮಾಡಿದ ಮನವಿಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರ, ಬೆಲೆ ಏರಿಕೆ ಅವರದೇ ನಿರ್ಧಾರವಾದರೆ, ಇಳಿಕೆ ಮಾಡಲು ನಮ್ಮಲ್ಲಿ ಕೇಳುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಹಣದುಬ್ಬರ ನಿಯಂತ್ರಣ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುವ ಕಾರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ 8 ರೂ. ಮತ್ತು 6 ರೂ. ಕಡಿತಗೊಳಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಟ್ವೀಟ್ ಮಾಡಿದ್ದರು. ಇದೇ ವೇಳೆ ಇಂಧನ ದರಗಳ ವ್ಯಾಟ್ ತಗ್ಗಿಸುವಂತೆ ಅವರು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದರು. ವಿಶೇಷವಾಗಿ 2021ರ ನವೆಂಬರ್ನಲ್ಲಿ ತೆರಿಗೆ ಕಡಿತ ಮಾಡದ ರಾಜ್ಯಗಳು ಇದನ್ನು ಪಾಲಿಸುವಂತೆ ಅವರು ಆಗ್ರಹಿಸಿದ್ದರು. ನಿರ್ಮಲಾ ಸೀತಾರಾಮನ್ ಅವರ ಈಆಗ್ರಹದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಈ ಪ್ರಶ್ನೆ ಹಾಕಿದ್ದಾರೆ.