ನಾಗಾಂವ್, ಮೇ 22 (DaijiworldNews/DB): ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಅಸ್ಸಾಂನ ನಾಗಾಂವ್ ಜಿಲ್ಲೆಯ ಬಟಾದ್ರವ ಎಂಬಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಶುಕ್ರವಾರ ರಾತ್ರಿ ಮೀನು ವ್ಯಾಪಾರಿಯೊಬ್ಬರು ಶಿವಸಾಗರ್ಗೆ ತೆರಳುತ್ತಿದ್ದ ವೇಳೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಬಳಿಕ ಪೊಲೀಸ್ ಕಸ್ಟಡಿಯಲ್ಲಿದ್ದಾತ ಮೃತಪಟ್ಟಿದ್ದ. ಇದರಿಂದ ಕೋಪಗೊಂಡ ಉದ್ರಿಕ್ತರ ಗುಂಪು ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಠಾಣೆ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳನ್ನೂ ಸುಟ್ಟಿದ್ದಾರೆ.
ಪೊಲೀಸರು ಬಂಧಿತ ಮೀನು ವ್ಯಾಪಾರಿ ಬಿಡುಗಡೆಯಾಗಬೇಕಾದರೆ 10 ಸಾವಿರ ರೂ. ನೀಡಬೇಕು ಎಂದು ಹೇಳಿದ್ದರು. ಹೀಗಾಗಿ ಆತನ ಪತ್ನಿ ಹಣ ಹೊಂದಿಸಿಕೊಂಡು ಶನಿವಾರ ಬೆಳಗ್ಗೆ ಠಾಣೆಗೆ ತೆರಳಿದ್ದರು. ಈ ವೇಳೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ತಲುಪಿದಾಗ ಆತಮೃತಪಟ್ಟಿರುವುದು ಗೊತ್ತಾಯಿತು ಎಂದು ಬಂಧಿತ ಮೀನು ವ್ಯಾಪಾರಿಯ ಮನೆಯವರು ಆಪಾದಿಸಿದ್ದಾರೆ. ಪೊಲೀಸರ ಚಿತ್ರಹಿಂಸೆಯೇ ಆತ ಮೃತಪಡಲು ಕಾರಣ ಎಂದು ಮನೆಯವರ ಆಪಾದನೆ. ಮೀನು ವ್ಯಾಪಾರಿಯ ಬಂಧನಕ್ಕೆ ಕಾರಣವೇನು ಎಂದು ತಿಳಿದು ಬಂದಿಲ್ಲ.
ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾಗಾಂವ್ ಎಸ್ಪಿ ಲೀನಾ ಡೋಲೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.