ನವದೆಹಲಿ, ಮೇ 22 (DaijiworldNews/DB): ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ.ದೇಶದ ಜನರ ಬಗೆಗೆ ಕಾಳಜಿ ಹೊಂದಿರುವ ನರೇಂದ್ರ ಮೋದಿಯವರು ಓರ್ವ ಸಂವೇದನಾಶೀಲ ನಾಯಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಪೆಟ್ರೋಲ್ಗೆ 8 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ಗೆ 6 ರೂ. ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಸದ್ಯ ಜಾಗತಿಕ ಪರಿಸ್ಥಿತಿ ಸವಾಲಿನಿಂದ ಕೂಡಿದ್ದರೂ, ಈ ಬೆಲೆ ಇಳಿಕೆಗಳು ಜನರಿಗೆ ಬಹುದೊಡ್ಡ ನಿರಾಳತೆ ಒದಗಿಸಲು ಕಾರಣವಾಗಿದೆ. ಪ್ರತಿ ವರ್ಗದ ಮೇಲೆಯೂ ಪ್ರಧಾನಿಗಿರುವ ಕಾಳಜಿ ಅವರೊಬ್ಬ ಸಂವೇದನಾಶೀಲ ನಾಯಕ ಎಂಬುದನ್ನು ತಿಳಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಬಡ ವರ್ಗ, ರೈತರು ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕೇಂದ್ರ ಶ್ರಮಿಸಿದೆ. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ ಜನಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸಿದ ಜನಸ್ನೇಹಿ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಾನು ಆಭಾರಿ ಎಂದು ಟ್ವೀಟಿಸಿದ್ದಾರೆ.
ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ನಿರ್ಧಾರ ಮಾಡಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 200 ರೂ. ಸಬ್ಸಿಡಿ ನೀಡುವ ಘೋಷಣೆಯೂ ಮಹತ್ವದ ಕ್ರಮ ಎಂದವರು ಬಣ್ಣಿಸಿದ್ದಾರೆ.