ಬೆಂಗಳೂರು, ಮೇ 21(DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯ ಬಳಿಕ ತ್ವರಿತಗತಿಯ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಚಿಂತನೆ ರಾಜ್ಯ ಸರ್ಕಾರದ ಮುಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, 545 ಪಿಎಸ್ಐ ನೇಮಕಾತಿ ಅಕ್ರಮ ಕುರಿತಂತೆ ಪ್ರಸ್ತುತ ಸಿಐಡಿಯ ತನಿಖೆಸಾಗುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾದವರು ಹಲವಾರು ವರ್ಷಗಳಿಂದಲೇ ಅಕ್ರಮದಲ್ಲಿ ತೊಡಗಿದ್ದರು ಎಂಬ ಮಾಹಿತಿ ಗೊತ್ತಾಗಿದೆ. ಹೀಗಾಗಿ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ವಿಶೇಷ ನ್ಯಾಯಾಲಯ ತೆರೆಯಲು ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದರು.
ಪ್ರಕರಣದ ತನಿಖೆ ಪಾರದರ್ಶಕವಾಗಿ ಸಾಗುತ್ತಿದೆ. ತನಿಖೆ ಮುಗಿದ ಬಳಿಕ ಆರೋಪಿಗಳ ನಿಜಬಣ್ಣ ತಿಳಿಯಲಿದೆ. ಪ್ರಕರಣದಲ್ಲಿ ಯಾರೊಬ್ಬರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದವರು ತಿಳಿಸಿದರು.