ಬೆಂಗಳೂರು, ಮೇ 21(DaijiworldNews/DB): ಬ್ರಿಗೇಡ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ವೊಂದಕ್ಕೆ ವೀಕೆಂಡ್ ಶಾಪಿಂಗ್ಗೆಂದು ಆಗಮಿಸಿದ ಯುವಕ ಮತ್ತು ಯುವತಿ ಕಟ್ಟಡದಿಂದ ಆಯತಪ್ಪಿ ಬಿದ್ದ ಪರಿಣಾಮ ಯುವತಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ.
ಕಟ್ಟಡದಿಂದ ಬಿದ್ದ ಯುವಕ ಮತ್ತು ಯುವತಿಯನ್ನು ಕ್ರಿಸ್ ಮತ್ತು ಲಿಯಾ ಎಂದು ಗುರುತಿಸಲಾಗಿದೆ. ಇಬ್ಬರೂ ವೀಕೆಂಡ್ ಶಾಪಿಂಗ್ಗೆಂದು ಇಂದು ಮಧ್ಯಾಹ್ನ ಸ್ನೇಹಿತರೊಂದಿಗೆ ಬ್ರಿಗೇಡ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ಗೆ ಬಂದಿದ್ದರು. ಈ ವೇಳೆ ಫಿಫ್ತ್ ಅವೆನ್ಯೂ ಕಟ್ಟಡದಿಂದ ಸುಮಾರು 60 ಅಡಿ ಎತ್ತರದಿಂದ ಸಾರ್ವಜನಿಕರು ನೋಡ ನೋಡುತ್ತಿರುವಾಗಲೇ ಕೆಳಗೆ ಬಿದ್ದಿದ್ದಾರೆ. ಇಬ್ಬರೂ ಗಂಭೀರ ಗಾಯಗೊಂಡಿದ್ದು, ತತ್ಕ್ಷಣ ನಿಮ್ಹಾನ್ಸ್ಗೆ ಸಾಗಿಸಲಾಗಿದೆ. ಆದರೆ ಯುವತಿಯ ತಲೆಗೆ ಗಂಭೀರಗಾಯವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ತಿಳಿಸಿವೆ.
ಇನ್ನು ಯುವಕ ಮತ್ತು ಯುವತಿ ಆತ್ಮಹತ್ಯೆಗೆ ಯತ್ನಿಸಿ ಕಟ್ಟಡದಿಂದ ಜಿಗಿದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಡಾ. ಎಸ್.ಡಿ. ಶರಣಪ್ಪ, ಪ್ರಾಥಮಿಕ ಮಾಹಿತಿಯಂತೆ ಇಬ್ಬರೂ ಆಯತಪ್ಪಿ ಬಿದ್ದಿದ್ದಾರೆ. ಘಟನೆಗೆ ಕಾರಣ ಏನು ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.