ಮುಂಬೈ, ಮೇ 21(DaijiworldNews/DB): ಮೋದಿ ಸರ್ಕಾರ ದೇಶದೆಲ್ಲೆಡೆ ಸೀಮೆ ಎಣ್ಣೆ ಹರಡಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಶಿವಸೇನಾ ನಾಯಕ ಸಂಜಯ್ ರಾವುತ್ ಬೆಂಬಲಿಸಿದ್ದಾರೆ. ನಾವೂ ಈ ವಿಚಾರವನ್ನು ಹಲವು ಬಾರಿ ಹೇಳಿದ್ದೆವು. ಆದರೆ ಹೇಳಿದ ರೀತಿ ಬೇರೆಯಾಗಿತ್ತಷ್ಟೆ ಎಂದವರು ಹೇಳಿದ್ದಾರೆ.
ಬಿಜೆಪಿ ದೇಶದೆಲ್ಲೆಡೆ ಸೀಮೆಎಣ್ಣೆ ಹರಡಿದೆ. ನಾವು ಅತಿದೊಡ್ಡಸಮಸ್ಯೆಯಲ್ಲಿ ಸಿಲುಕಲು ಕೇವಲ ಒಂದು ಕಿಡಿ ಮಾತ್ರ ಬೇಕಾಗಿರುವುದು ಎಂಬುದಾಗಿ ಲಂಡನ್ನಲ್ಲಿ ಶುಕ್ರವಾರ ಮಾತನಾಡಿದ್ದ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಅವರ ಈ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾವುತ್, ತನಿಖಾ ಸಂಸ್ಥೆಗಳ ನೆರವಿನಿಂದ ದೇಶದ ಪ್ರಜಾಪ್ರಭುತ್ವವನ್ನು ಅಧಃಪತನಕ್ಕೆ ತಳ್ಳಲಾಗುತ್ತಿದೆ. ಆದರೆ ಯಾರಾದರೂ ಕೇಂದ್ರದ ವಿರುದ್ದ ಮಾತನಾಡಿದರೆ ಅಭಿಯಾನಗಳ ಮೂಲಕ ಅವರ ದನಿಯನ್ನೇ ಹತ್ತಿಕ್ಕುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ಆದರೆ ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂದರು.
ಜನ ಸತ್ಯ ಹೇಳಲು ಹೆದರುವ ಪರಿಸ್ಥಿತಿ ದೇಶದಲ್ಲಿ ಬಂದೊದಗಿದೆ. ಯಾರಾದರೂ ಕೇಂದ್ರದ ವಿರುದ್ದ ಧ್ವನಿ ಎತ್ತಿದರೆ ಅವರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಸರಣಿ ತನಿಖೆ ನಡೆಸಿ ಅವರ ಧ್ವನಿಯನ್ನು ಶಾಶ್ವತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರದ ವಿರುದ್ದ ರಾವುತ್ ಹರಿಹಾಯ್ದಿದ್ದಾರೆ.