ಹೊಸದಿಲ್ಲಿ/ಬೆಂಗಳೂರು, ಮೇ 21(DaijiworldNews/DB): ಸಂಪುಟ ಪುನಾರಚನೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಗೃಹಸಚಿವ ಅಮಿತ್ ಶಾ ಅವರು ಕೆಲಸದ ಮೇಲೆ ಬೇರೆಡೆಗೆ ಹೋಗಿರುವುದರಿಂದ ಮಾತನಾಡಲು ಲಭ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಭೇಟಿಗೆ ಸಿಗದ ಕಾರಣವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ವಿಧಾನ ಪರಿಷತ್ ಮತ್ತು ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಾತನಾಡಿದ್ದೇನೆಯೇ ಹೊರತು ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ ಎಂದರು.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಕೋರ್ ಕಮಿಟಿ ಸಭೆಯಲ್ಲಿ ನಡೆದ ಚರ್ಚೆ ಮತ್ತು ಪರಿಷತ್ ಹಾಗೂ ರಾಜ್ಯ ಸಭೆಯ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯ ಕುರಿತು ಚರ್ಚಿಸಲಾಗಿದೆ. ಸಂಪುಟ ವಿಸ್ತರಣೆ ಮಾತುಕತೆ ಇಲ್ಲಿಯೂ ನಡೆದಿಲ್ಲ ಎಂದುತಿಳಿಸಿದರು.
ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗಿರುವುದರಿಂದ ಕೆಲವೆಡೆ ಹಾನಿಗಳು ಸಂಭವಿಸಿದೆ. ಹಾನಿಗಳಾದಲ್ಲಿ ಅಂತಹವರಿಗೆ ಪರಿಹಾರ ವಿತರಣೆ ಸಂಬಂಧಿಸಿ ಮಾತನಾಡಲು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು.