ಬೆಂಗಳೂರು, ಮೇ 21 (DaijiworldNews/MS): ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯ ತೀರ್ಪು ನೀಡಿದ್ದು, ಎಲ್ಲ 12 ಮಂದಿ ಆರೋಪಿಗಳೂ ಅಪರಾಧಿಗಳೆಂದು ಸಾಬೀತಾಗಿದ್ದು, ಆ ಪೈಕಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
2021 ಮೇ 18. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ಯುವತಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದರು. ಅಲ್ಲದೇ ಮಹಿಳೆ ಮೇಲಿನ ಕ್ರೌರ್ಯದ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆ ವಿಡಿಯೋ ವೈರಲ್ ಬಾಂಗ್ಲಾ ದೇಶದಲ್ಲಿ ವೈರಲ್ ಆಗಿ ಅಲ್ಲಿನ ಪೊಲೀಸರು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು, ಕಾರ್ಯಾಚರಣೆ ನಡೆಸಿ, ಕೆಲವೇ ದಿನಗಳಲ್ಲಿ ಬರೋಬ್ಬರಿ 10 ಮಂದಿ ಆರೋಪಿಗಳನ್ನ ಬಂಧಿಸಿ, ಕೈಗೆ ಬೇಡಿಯನ್ನು ತೊಡಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ 54ನೇ ಸಿಸಿಎಚ್ ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದ ಪ್ರಮುಖ ಅಪರಾಧಿಗಳಾದ ಸೊಬುಜ್, ಹೃದಾಯ್ ಬಾಬು, ರಫ್ಸಾನ್ ಮಂಡಲ್, ರಾಕಿಬುಲ್ ಇಸ್ಲಾಂ ಸಾಗರ್, ಮೊಹಮ್ಮದ್ ಬಾಬು, ದಲೀಂ ಹಾಗೂ ಅಜೀಮ್ಗೆ ಜೀವಾವಧಿ ಶಿಕ್ಷೆ ಗುರಿಪಡಿಸಲಾಗಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ತಾನೀಯಾ ಖಾನಂ ಎಂಬಾಕೆಗೆ 20 ವರ್ಷ ಹಾಗೂ ಜಮಾಲ್ನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಇನ್ನಿಬ್ಬರು ಆರೋಪಿಗಳಾದ ನುಸ್ರತ್ ಹಾಗೂ ಕಾಜಲ್ಗೆ ತಲಾ 9 ತಿಂಗಳು ಜೈಲು ಶಿಕ್ಷೆ ಪ್ರಕಟಿಸಲಾಗಿದೆ ಎಂದು ರಾಮಮೂರ್ತಿನಗರ ಠಾಣೆ ಪೊಲೀಸರು ಹೇಳಿದ್ದಾರೆ.