ಉತ್ತರಾಖಂಡ, ಮೇ 21 (DaijiworldNews/MS): ಈ ವರ್ಷ ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದೇ ವೇಳೆ ಮಳೆಯಿಂದಾಗಿ ಹಲವೆಡೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರ ನಡುವೆ ಯಮುನೋತ್ರಿ ಧಾಮಕ್ಕೆ ಹೋಗುವ ಹೆದ್ದಾರಿಯ ಸುರಕ್ಷತಾ ಗೋಡೆ ಕುಸಿದಿದೆ ಎಂದು ವರದಿಯಾಗಿದೆ. ಇದರಿಂದ ಸುಮಾರು 10 ಸಾವಿರ ಭಕ್ತರು ಪರದಾಡುವಂತಾಗಿದೆ.
ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ತಡೆ ಗೋಡೆ ಕುಸಿದು, ಸುಮಾರು 10,000 ಭಕ್ತರು ವಿವಿಧೆಡೆ ಸಿಲುಕಿಕೊಂಡಿದ್ದಾರೆ. ರಸ್ತೆ ತೆರೆಯುವ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಯನ್ನು ತೆರೆಯಲು ಸುಮಾರು 3 ದಿನಗಳು ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲಿಯವರೆಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿಯವರು ಪ್ರಯಾಣಿಕರನ್ನು ಸಾಗಿಸಲು ಚಿಕ್ಕ ವಾಹನಗಳನ್ನು ಬಳಸುತ್ತಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗುತ್ತಿದೆ. ಈ ಹಿಂದೆ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಹನುಮಾನ್ ಚಟ್ಟಿಯಿಂದ ಬದರಿನಾಥದ ನಡುವೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.